ಮಡಿಕೇರಿ, ಮಾ. ೨೭: ಮಾದಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಸುಮಾರು ೫೦೦ಕ್ಕೂ ಅಧಿಕ ಕಡು ಬಡ ಕುಟುಂಬಗಳಿಗೆ ವಸತಿಯನ್ನು ನೀಡುವಂತೆ ಒತ್ತಾಯಿಸಿ ಕಳೆದ ೧೫ ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದರೂ ಇಲ್ಲಿಯವರೆಗೆ ಬೇಡಿಕೆ ಈಡೇರದೆ ಇರುವುದರಿಂದ ಮುಂಬರುವ ಜಿ.ಪಂ ಮತ್ತು ತಾ.ಪಂ ಚುನಾವಣೆಗಳನ್ನು ಬಹಿಷ್ಕರಿಸಲು ಅರ್ಹ ಫಲಾನುಭವಿ ಗಳು ನಿರ್ಧರಿಸಿರುವುದಾಗಿ ಎಐಟಿಯುಸಿ ಸಂಘಟನೆಯ ಮಾದಾಪುರ ವಿಭಾಗದ ಸೂರಿಗಾಗಿ ಸಮಿತಿ ತಿಳಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ಚುನಾವಣೆಗಳು ಸಮೀಪಿಸಿದಾಗಲೆಲ್ಲಾ ಸುಳ್ಳು ಭರವಸೆಗಳನ್ನು ನೀಡುವ ರಾಜಕಾರಣಿಗಳು ಗೆದ್ದು ಬಂದ ಮೇಲೆ ಬಡವರನ್ನು ಹಾಗೂ ಕಾರ್ಮಿಕ ವರ್ಗವನ್ನು ಕಡೆಗಣಿಸುತ್ತಲೇ ಬಂದಿದ್ದಾರೆ ಎಂದು ಆರೋಪಿಸಿದರು.
ಕಳೆದ ಗ್ರಾ.ಪಂ. ಚುನಾವಣೆ ಸಂದರ್ಭವೇ ಸೂರಿಗಾಗಿ ಬೇಡಿಕೆ ಇಡಲಾಗಿತ್ತು. ಆದರೆ ಯಾರೂ ಸ್ಪಂದನೆ ನೀಡದೆ ಇರುವುದರಿಂದ ಈ ಬಾರಿ ಜಿ.ಪಂ ಹಾಗೂ ತಾ.ಪಂ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಹೇಳಿದರು.
ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಜಂಬೂರು ಗ್ರಾಮದಲ್ಲಿ ಮಳೆಹಾನಿ ಸಂತ್ರಸ್ತರಿಗಾಗಿ ೫೦೦ ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಅರ್ಹರಲ್ಲದವರಿಗೂ ಮನೆ ಹಂಚಿಕೆ ಮಾಡಲಾಗಿದೆ. ಸ್ಥಳೀಯ ವಸತಿ ರಹಿತ ಬಡವರು ಹಾಗೂ ಕಾರ್ಮಿಕರು ವಾಸಿಸಲು ಸೂರಿಲ್ಲದೆ ಕಳೆದ ಅನೇಕ ವರ್ಷಗಳಿಂದ ಸಂಕಷ್ಟವನ್ನು ಎದುರಿಸುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಸತಿ ಸೌಲಭ್ಯ ಕಲ್ಪಿಸಿಕೊಡುವ ಪ್ರಯತ್ನ ನಡೆದಿಲ್ಲ.
ಜಿಲ್ಲೆಯ ಶಾಸಕರುಗಳು ಒಂದೇ ಒಂದು ದಿನ ಸದನದಲ್ಲಿ ಬಡವರು ಹಾಗೂ ಕಾರ್ಮಿಕರ ಪರವಾಗಿ ಧ್ವನಿ ಎತ್ತಿಲ್ಲ. ಐದು ವರ್ಷಕ್ಕೊಮ್ಮೆ ಬರುವ ಚುನಾವಣೆ ಸಂದರ್ಭ ಮಾತ್ರ ಪ್ರತ್ಯಕ್ಷರಾಗಿ ಪೊಳ್ಳು ಭರವಸೆ ನೀಡಿ ಹೋಗುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಸತಿ ಯೋಜನೆಗಳು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲವೆಂದು ಆರೋಪಿಸಿದರು.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷö್ಯ ಮನೋಭಾವವನ್ನು ಖಂಡಿಸಿ ಮತ್ತು ಶೀಘ್ರ ಬಡವರಿಗೆ ಸೂರು ಕಲ್ಪಿಸುವಂತೆ ಒತ್ತಾಯಿಸಿ ತಾ. ೨೯ ರಂದು (ನಾಳೆ) ಮಾದಾಪುರ ಗ್ರಾ.ಪಂ. ಎದುರು ಸೂರಿಗಾಗಿ ಸಮಿತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸೋಮಪ್ಪ ತಿಳಿಸಿದರು.
ಜಂಬೂರು ಭಾಗದಲ್ಲಿ ಮಳೆಹಾನಿ ಸಂತ್ರಸ್ತರಿಗಾಗಿ ನಿರ್ಮಿಸಲಾಗಿರುವ ಮನೆಗಳಲ್ಲಿ ಕೆಲವನ್ನು ಅರ್ಹರಲ್ಲದ ವರಿಗೆ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ನಿಯಮ ಬಾಹಿರವಾಗಿ ಆಶ್ರಯ ಪಡೆದವರ ಹಕ್ಕು ಪತ್ರವನ್ನು ರದ್ದುಪಡಿಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಅಣ್ಣಪ್ಪ ಬಿ., ಕಾರ್ಯದರ್ಶಿ ಶಭಾನ ಎಸ್.ಹೆಚ್. ಹಾಗೂ ಸದಸ್ಯ ಕೃಷ್ಣ ಟಿ. ಉಪಸ್ಥಿತರಿದ್ದರು.