ಮಡಿಕೇರಿ, ಮಾ. ೨೭: ಹೊದ್ದೂರು ಪಂಚಾಯಿತಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಮಾನಸಿಕ ಸ್ಥಿತಿಗತಿಗಳ ಬಗ್ಗೆ ಸಂವಾದ ಹಾಗೂ ಅಧ್ಯಯನ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯ ವೈದ್ಯೆ ಡಾ. ಚೈತ್ರಾ ಹಾಗೂ ಅವರ ತಂಡದವರು ಅಧ್ಯಯನ ನಡೆಸಿ ಸರಕಾರದ ಹೊಸ ಯೋಜನೆಯನ್ನು ರೂಪಿಸಲು ವರದಿಯನ್ನು ಸಲ್ಲಿಸಲು ಬೇಕಾದ ಮಾಹಿತಿಯನ್ನು ಸಂಗ್ರಹಿಸಿದರು. ನಂತರ ಸ.ಹಿ.ಪ್ರಾ. ಶಾಲೆ ವಾಟೆಕಾಡು ಇಲ್ಲಿಯ ೬ ಮತ್ತು ೭ನೇ ತರಗತಿಯ ಮಕ್ಕಳೊಂದಿಗೆ ಸಂವಾದವನ್ನು ನಡೆಸಿ, ಮಕ್ಕಳ ಜನವಸತಿ ಪ್ರದೇಶದ ಸ್ಥಿತಿಗತಿಯ ಬಗ್ಗೆ ಪರಿಶೀಲಿಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಕುಸುಮಾ, ಉಪಾಧ್ಯಕ್ಷೆ ಸರಸು, ಗ್ರಾ.ಪಂ. ಸದಸ್ಯರುಗಳು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷಿö್ಮ ಚಂದ್ರಶೇಖರ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಕವಿತ, ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮೋಹನ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಹೇಮಂತ್, ಹೊದ್ದೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ, ಪಂಚಾಯಿತಿಗೆ ಒಳಪಟ್ಟ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಾಟೆಕಾಡು ಶಾಲೆಯ ಶಿಕ್ಷಕ ಕುಮಾರಸ್ವಾಮಿ ಟಿ.ಬಿ., ಇವರು ಉಚಿತವಾಗಿ ಗ್ರಾಮ ಪಂಚಾಯಿತಿ ಗ್ರಂಥಾಲಯದ ಗೋಡೆಗಳಿಗೆ ಮಕ್ಕಳ ಸ್ನೇಹಿ ಚಿತ್ರವನ್ನು ಬರೆದಿರುವುದರಿಂದ ಎಲ್ಲರ ಸಮ್ಮುಖದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.