ಕಣಿವೆ, ಮಾ. ೨೬: ಪ್ರವಾಸೋದ್ಯಮ ಸಚಿವರ ಕೊಡಗು ಜಿಲ್ಲಾ ಪ್ರವಾಸದ ನಿಮಿತ್ತ ಸಚಿವರ ಆಪ್ತರು ಹಾಗೂ ಸ್ನೇಹಿತರನೇಕರು ಆಡು ಕುರಿಗಳ ಸಹಿತ ಹಾರಂಗಿ ಜಲಾಶಯದ ಪ್ರವಾಸಿ ಮಂದಿರದ ಆವರಣದಲ್ಲಿ ಶನಿವಾರ ಹಾಗೂ ಭಾನುವಾರಗಳಂದು ಸಂತೋಷ ಕೂಟ ಮಾಡಲು ಯೋಜಿಸಿರುವ ವಿಚಾರ ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸಿದೆ.
ಹಾರಂಗಿ ಒಡಲಲ್ಲಿ ಇರುವ ಮಾತೆ ಕಾವೇರಿಗೆ ಅಪಚಾರವಾಗುವಂತಹ ಯಾವುದೇ ವ್ಯರ್ಥ ಅಥವಾ ಸಂಸ್ಕೃತಿ ಹೀನ ಕೂಟಗಳು ಅಸಮಂಜಸ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಅಧೀನದ ಈ ಪ್ರವಾಸೀ ಮಂದಿರದ ಆವರಣದಲ್ಲಿ ಇಂತಹ ಅಡ್ಡೆಗಳಿಗೆ ಅವಕಾಶ ಕಲ್ಪಿಸಕೂಡದು ಎಂದು ಸಾರ್ವಜನಿಕರು ಹಾರಂಗಿ ಅಣೆಕಟ್ಟು ವಿಭಾಗದ ರಕ್ಷಣಾ ಅಧಿಕಾರಿಗಳು ಹಾಗೂ ನೀರಾವರಿ ನಿಗಮದ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. - ಮೂರ್ತಿ