ಮಡಿಕೇರಿ, ಮಾ. ೨೫: ನಗರದಲ್ಲಿ ಮಾಸ್ಕ್ ಧರಿಸದ ಅಂಗಡಿ ಮಾಲೀಕರು, ಗ್ರಾಹಕರಿಗೆ ನಗರಸಭೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ಒಂದು ಗಂಟೆಯಲ್ಲೇ ೩೫ ಅಂಗಡಿಗಳ ಮೇಲೆ ದಾಳಿ ಮಾಡಿದ ನಗರಸಭೆ ಅಧಿಕಾರಿಗಳು, ಕೊರೊನಾ ನಿಯಮ ಪಾಲನೆ ಮಾಡದವರಿಗೆ ದಂಡ ವಿಧಿಸಿ, ಎಚ್ಚರಿಕೆಯನ್ನು ನೀಡಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಏರುತ್ತಿದ್ದರೂ ಜನತೆ ಮಾತ್ರ ನಿರ್ಲಕ್ಷ್ಯ ವಹಿಸುತ್ತಲೇ ಇದ್ದಾರೆ. ಈ ಬಗ್ಗೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಪದೇ ಪದೇ ಜನತೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ವಿನಂತಿ ಮಾಡುತ್ತಿದ್ದರು. ಆದರೂ ಜನತೆ ಇದಾವುದನ್ನು ಗಂಭೀರವಾಗಿ ಪರಿಗಣನೆ ಮಾಡದ ಪರಿಣಾಮ ಎಚ್ಚೆತ್ತುಕೊಂಡ ಅಧಿಕಾರಿಗಳು ಗುರುವಾರ ದಿಢೀರನೆ ಅಂಗಡಿ ಮಾಲೀಕರು ಹಾಗೂ ಗ್ರಾಹಕರಿಗೆ ದಂಡ ವಿಧಿಸಿದ್ದಾರೆ.
ಬಹುತೇಕ ಅಂಗಡಿಗಳಲ್ಲಿ ಮಾಲೀಕರು ಮತ್ತು ಗ್ರಾಹಕರು ಮಾಸ್ಕ್ ಧರಿಸದೇ ಇರುವುದು ಕಂಡು ಬಂತು. ಮೆಡಿಕಲ್ ಶಾಪ್‌ಗಳಲ್ಲೇ ಮಾಸ್ಕ್ ಹಾಕದ ಸಿಬ್ಬಂದಿಗಳಿಗೂ ದಂಡ ವಿಧಿಸಲಾಯಿತು. ನಗರಸಭೆ ಆಯುಕ್ತ ರಾಮದಾಸ್ ನೇತೃತ್ವದಲ್ಲಿ ಅಂಗಡಿಗಳ ಮೇಲೆ ರೈಡ್ ನಡೆಸಲಾಯಿತು.