ಮಡಿಕೇರಿ, ಮಾ. ೨೫: ಅನಧಿಕೃತವಾಗಿ ಮಂಜೂರಾಗಿರುವ ೨೦೬ ಪಹಣಿಗಳನ್ನು ಉಪವಿಭಾಗಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ರದ್ದುಪಡಿಸಲಾಗಿದೆ ಎಂದು ಮೇಲ್ಮನೆಯಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಪ್ರಶ್ನೆಗೆ ಕಂದಾಯ ಸಚಿವ ಆರ್. ಅಶೋಕ್ ಉತ್ತರಿಸಿದರು.

ಕೊಡಗು ಜಿಲ್ಲೆಯಲ್ಲಿ ೨೦೧೨-೧೩ರಲ್ಲಿ ಅಕ್ರಮ ಸಕ್ರಮದ ಅಡಿಯಲ್ಲಿ ಎಷ್ಟು ರೈತರಿಗೆ ಸಾಗುವಳಿ ಚೀಟಿ ನೀಡಲಾಗಿದೆ. ಸಾಗುವಳಿ ಚೀಟಿ ಪಡೆದ ಎಷ್ಟು ರೈತರಿಗೆ ಪಹಣಿ ಬಂದಿದೆ ಎಂದು ವೀಣಾ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು, ೭೩೩ ರೈತರಿಗೆ ಕೊಡಗು ಜಿಲ್ಲೆಯಲ್ಲಿ ಸಾಗುವಳಿ ಚೀಟಿ ನೀಡಲಾಗಿದೆ. ಚೀಟಿ ಪಡೆದ ಎಲ್ಲರಿಗೂ ಆರ್.ಟಿ.ಸಿ ಒದಗಿಸ ಲಾಗಿದೆ. ಈ ಪೈಕಿ ಅನಧಿಕೃತವಾಗಿ ಮಂಜೂರಾದ ಪಹಣಿಯನ್ನು ರದ್ದು ಮಾಡಲಾಗಿದೆ. ೨೦೧೫-೧೬ರಲ್ಲಿ ಸಾಗುವಳಿ ಚೀಟಿ ಹಾಗೂ ಆರ್‌ಟಿಸಿ ಗಳನ್ನು ನೀಡಲು ಆದೇಶಿಸಿಲ್ಲ ಎಂದರು.

ಆಲಿಕಲ್ಲು ಮಳೆ - ೩.೧೮ ಕೋಟಿ ನಷ್ಟ

ಶನಿವಾರಸಂತೆ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆಯ ನಷ್ಟದ ಬಗ್ಗೆ ವೀಣಾ ಅಚ್ಚಯ್ಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಆರ್.ಅಶೋಕ್, ರೂ ೧.೫೩ ಕೋಟಿ ಮೌಲ್ಯದ ೨೧೦ ಎಕರೆಯ ಕಾಫಿ ಬೆಳೆ ಮಳೆಗೆ ನಷ್ಟವಾಗಿದೆ. ಇದರೊಂದಿಗೆ ರೂ ೩೫ ಲಕ್ಷದ ೧೭೫ ಎಕರೆ ವಿಸ್ತಿçÃðಣದ ಜೋಳ, ರೂ ೧೬.೩೫ ಲಕ್ಷದ ೧೦೯ ಎಕ್ರೆ ಶುಂಠಿ, ರೂ ೨೧.೪೫ ಲಕ್ಷದ ೧೪೩ ಎಕರೆಯ ಹಸಿರು ಮೆಣಸಿನಕಾಯಿ, ರೂ ೧೩.೯೫ ಲಕ್ಷದ ೯೩ ಎಕರೆಯ ಸಿಹಿಗೆಣಸು, ರೂ ೩೬ ಲಕ್ಷದ ೨೪೦ ಎಕರೆಯ ಕಾಳುಮೆಣಸು, ರೂ ೨೨.೨೦ ಲಕ್ಷದ ೧೪೮ ಎಕರೆಯ ಅಡಿಕೆ, ರೂ ೨೦.೫೫ ಲಕ್ಷದ ೧೩೭ ಎಕರೆ ಬಾಳೆ ಬೆಳೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಯ ಜಂಟಿ ಸಮೀಕ್ಷೆ ನಂತರ ಶೇ ೩೩ ಕ್ಕಿಂತ ಹೆಚ್ಚಿನ ಬೆಳೆ ಹಾನಿಗೆ ತುತ್ತಾದ ಕೃಷಿಕರಿಗೆ ಕೇಂದ್ರ ಸರಕಾರದ ಎನ್.ಡಿ.ಆರ್.ಎಫ್, ಎಸ್.ಡಿ. ಆರ್.ಎಫ್. ಮಾರ್ಗಸೂಚಿ ಪ್ರಕಾರ ಗರಿಷ್ಟ ೨ ಹೆಕ್ಟೇರ್‌ಗೆ ಸೀಮಿತಗೊಳಿಸಿ ಇನ್ಪುಟ್ ಸಬ್ಸಿಡಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.