ಮಡಿಕೇರಿ, ಮಾ. ೨೩: ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆ. ನಿಡುಗಣೆ ಗ್ರಾಮದ ಮಹೀಂದ್ರ ರೆಸಾರ್ಟ್ ಸಮೀಪ ಫೆ. ೨೨ ರಂದು ನಡೆದಿದ್ದ ಒಂಟಿ ಮಹಿಳೆಯ ಹತ್ಯೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಅನಿಲ್ ಎಂಬಾತನನ್ನು ಬಂಧಿಸಿದ್ದು, ಹಲವರಿಂದ
ಪಡೆದಿದ್ದ ಸಾಲ ತೀರಿಸುವುದಕ್ಕಾಗಿ ದೃಷ್ಕೃತ್ಯವೆಸಗಿದ್ದುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರು ಗ್ರಾಮಾಂತರ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಒಂಟಿಯಾಗಿ ವಾಸವಿದ್ದ ಲಲಿತಾ (೭೦) ಅವರನ್ನು ಹತ್ಯೆಮಾಡಿ ಚಿನ್ನಾಭರಣ ದೋಚಿದ್ದ ಆರೋಪಿ ಅನಿಲ್ (೨೯) ಮೂಲತಃ ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದ್ರೆಯವನಾಗಿದ್ದು, ಮೆಕ್ಯಾನಿಕಲ್ ಇಂಜಿನಿಯರಿAಗ್ ಪದವೀಧರನಾಗಿದ್ದಾನೆ. ಲಲಿತ ಅವರ ಮನೆಯ ಸಮೀಪವಿರುವ ಖಾಸಗಿ ರೆಸಾರ್ಟ್ವೊಂದರಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಅನಿಲ್, ಲಲಿತಾ ಅವರು ಮನೆಯಲ್ಲಿ ಒಬ್ಬರೆ ವಾಸವಿದ್ದ ಬಗ್ಗೆ ತಿಳಿದುಕೊಂಡಿದ್ದ. ಯಾರೊಂದಿಗೂ ಹೆಚ್ಚಿನ ಸಂಪರ್ಕವಿಲ್ಲದೆ, ತನ್ನಪಾಡಿಗೆ ತಾನಿರುತ್ತಿದ್ದ ಲಲಿತಾ ಅವರು ಫೆ. ೨೨ ರ ಸಂಜೆ ವೇಳೆ ಸ್ನಾನಕ್ಕೆ ನೀರು ಕಾಯಿಸ ಲೆಂದು ಮನೆಯ ಹಿಂಭಾಗಕ್ಕೆ ಬಂದ ವೇಳೆ ಸಮೀಪದ ತೋಟದಲ್ಲಿ ಹೊಂಚು ಹಾಕಿ ಕುಳಿತಿದ್ದ ಅನಿಲ್ ರಾಡ್ನಿಂದ ಲಲಿತಾ ಅವರ ಮೇಲೆ ಹಲ್ಲೆ ಮಾಡಿ ಹತ್ಯೆಗೈದು ಅವರ ಮನೆ ಯಲ್ಲಿದ್ದ ೭೨ ಗ್ರಾಂ ಚಿನ್ನಾಭರಣ ಸುಮಾರು ೫೦ ಸಾವಿರದಷ್ಟು ನಗದನ್ನು ದೋಚಿದ್ದ.
ಏನೂ ಗೊತ್ತಿಲ್ಲದಂತಿದ್ದ!
ಮಹಿಳೆಯ ಹತ್ಯೆ ಮಾಡಿ ಆಭರಣ ದೋಚಿದ
(ಮೊದಲ ಪುಟದಿಂದ) ಬಳಿಕ ಆರೋಪಿ ಅನಿಲ್ ತನಗೆ ಏನೂ ಗೊತ್ತಿಲ್ಲದವನಂತೆ ಕೆಲ ದಿನಗಳ ಕಾಲ ರೆಸಾರ್ಟ್ನಲ್ಲಿ ಕೆಲಸ ಮುಂದುವರಿಸಿದ್ದ. ಈ ನಡುವೆ ಪೊಲೀಸರ ತನಿಖೆ ಚುರುಕುಗೊಂಡಿರುವ ಬಗ್ಗೆ ಮಾಹಿತಿ ತಿಳಿದುಕೊಂಡ ಅನಿಲ್ ತನಗೆ ಆರೋಗ್ಯ ಸರಿಯಿಲ್ಲವೆಂದು ಹೇಳಿ ತನ್ನ ಬೈಕ್ನಲ್ಲಿಯೇ ಮೂಡಬಿದ್ರೆಗೆ ತೆರಳಿದ್ದ. ಚಿಕಿತ್ಸೆಯನ್ನು ಪಡೆದಿದ್ದ.
ಪೊಲೀಸರಿಗೆ ಸವಾಲಾಗಿದ್ದ ಪ್ರಕರಣ
ಲಲಿತಾ ಅವರ ಹತ್ಯೆ ಪ್ರಕರಣ ಪೊಲೀಸರಿಗೆ ಒಂದು ರೀತಿಯಲ್ಲಿ ಸವಾಲಾಗಿ ಪರಿಣಮಿಸಿತ್ತು. ಆರೋಪಿ ಬಗ್ಗೆ ತಕ್ಷಣಕ್ಕೆ ಯಾವುದೇ ಕುರುಹುಗಳು ಇಲ್ಲದ್ದರಿಂದ ಹಲವು ದಿನಗಳ ಕಾಲ ಪೊಲೀಸರು ತೀವ್ರ ತಲೆಕೆಡಿಸಿಕೊಳ್ಳುವಂತಾಗಿತ್ತು. ಕೊನೆಗೂ ತಳಮಟ್ಟದಿಂದ ತನಿಖೆ ನಡೆಸಿದ ಪೊಲೀಸರು ಆರೋಪಿ ಅನಿಲ್ನನ್ನು ಮೂಡಬಿದ್ರೆಯಲ್ಲಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ತಾನು ಹಲವರಿಂದ ಪಡೆದಿದ್ದ ಸಾಲ ಹಿಂತಿರುಗಿಸುವ ಸಲುವಾಗಿ ಹಣದ ಸಮಸ್ಯೆ ಇದ್ದ ಕಾರಣ ಈ ದುಷ್ಕೃತ್ಯವೆಸಗಿರುವುದಾಗಿ ಅನಿಲ್ ಒಪ್ಪಿಕೊಂಡಿದ್ದಾನೆ.
ಮೂರು ವರ್ಷಗಳಿಂದ ಕೆಲಸ
ಆರೋಪಿ ಅನಿಲ್ನ ಪೋಷಕರು ಈ ಹಿಂದೆಯೇ ಮೃತರಾಗಿದ್ದು, ಕಳೆದ ಮೂರು ವರ್ಷಗಳಿಂದ ಅನಿಲ್ ಖಾಸಗಿ ರೆಸಾರ್ಟ್ನಲ್ಲಿ ಪ್ರವಾಸಿಗರಿಗೆ ಸಾಹಸ ಕ್ರೀಡೆಗಳಿಗೆ ಬಳಸುವ ಎಟಿವಿ ಬೈಕ್ಗಳನ್ನು ನಿರ್ವಹಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದ. ಈತನನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಸಂದರ್ಭ ರೆಸಾರ್ಟ್ನವರು ಈತನ ಪೂರ್ವಾಪರದ ಬಗ್ಗೆ ಪೊಲೀಸರ ಪರಿಶೀಲನೆಗೆ ಒಳಪಡಿಸಿರಲಿಲ್ಲ. ಮಹಿಳೆಯನ್ನು ಹತ್ಯೆಗೈದ ಬಳಿಕ ಮೂಡಬಿದ್ರೆಯ ತನ್ನ ಅಜ್ಜಿ ಮನೆಗೆ ತೆರಳಿದ್ದ.
ಚಿನ್ನಾಭರಣ ವಶ
ಬಂಧಿತ ಆರೋಪಿ ಕಳವು ಮಾಡಿ ಮಂಗಳೂರು ಹಾಗೂ ಮೂಡಬಿದ್ರೆಯ ಜ್ಯುವೆಲರಿ ಶಾಪ್ಗಳಿಗೆ ಮಾರಾಟ ಮಾಡಿದ್ದ ೨ ಲಕ್ಷ ೮೦ ಸಾವಿರ ಮೌಲ್ಯದ ಚಿನ್ನಾಭರಣ, ಕಳವು ಮಾಡಿದ್ದ ನಗದಿನಲ್ಲಿ ಆತ ಖರ್ಚು ಮಾಡಿ ಉಳಿಸಿದ್ದ ೪ ಸಾವಿರ ರೂ. ಹಣ ಹಾಗೂ ಆತನ ಅಪಾಚಿ ಬೈಕ್ (ಕೆ.ಎ.೨೦ ಯು. ೯೭೩೫), ಕೃತ್ಯಕ್ಕೆ ಬಳಸಿದ್ದ ರಾಡ್ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸ್ ಅಧೀಕ್ಷಕಿ ಕ್ಷಮಾಮಿಶ್ರ ಮತ್ತು ಡಿವೈಎಸ್ಪಿ ಬಿ.ಪಿ. ದಿನೇಶ್ಕುಮಾರ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ರವಿಕಿರಣ್, ಡಿಸಿಐಬಿ ಸಿಬ್ಬಂದಿಗಳಾದ ಯೋಗೇಶ್ಕುಮಾರ್, ನಿರಂಜನ್, ಶರತ್ರೈ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ರವಿಕುಮಾರ್, ಮಂಜುನಾಥ್, ದಿನೇಶ್, ಸೋಮಶೇಖರ್ ಸಜ್ಜನ್, ಸಿದ್ದಾಪುರ ಪೊಲೀಸ್ ಠಾಣೆಯ ಎಎಸ್ಐ ತಮ್ಮಯ್ಯ, ಸಿಬ್ಬಂದಿ ಲವಕುಮಾರ್, ಡಿಸಿಐಬಿ ಎಎಸ್ಐ ಹಮೀದ್, ಅನಿಲ್ಕುಮಾರ್, ವೆಂಕಟೇಶ್, ವಸಂತ, ಸುರೇಶ್, ಶಶಿಕುಮಾರ್ ಹಾಗೂ ಸಿಡಿಆರ್ ಸೆಲ್ನ ರಾಜೇಶ್ ಹಾಗೂ ಗಿರೀಶ್ ಇವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಇವರ ಕಾರ್ಯವನ್ನು ಶ್ಲಾಘಿಸಿ ಪೊಲೀಸ್ ಅಧೀಕ್ಷಕರು ನಗದು ಬಹುಮಾನವನ್ನು ಘೋಷಿಸಿದ್ದಾರೆ.