ಸೋಮವಾರಪೇಟೆ, ಮಾ. ೨೩: ಸೋಮವಾರಪೇಟೆ ಜೇಸೀ ಪುಷ್ಪಗಿರಿ ಹಾಗೂ ಕರ್ನಾಟಕ ಜಾನಪದ ಪರಿಷತ್ನ ಸೋಮವಾರಪೇಟೆ ತಾಲೂಕು ಘಟಕ ಮತ್ತು ಸಾಹಿತ್ಯ ವಿಭಾಗದ ವತಿಯಿಂದ ಇಲ್ಲಿನ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ‘ವಿಶ್ವ ಕವನ ದಿನ-ಕವನ ಸಮ್ಮಿಲನ’ದಲ್ಲಿ ಭಾಗವಹಿಸಿದ್ದ ಕವಿಗಳು, ತಮ್ಮ ಕಲ್ಪನೆ, ಆಲೋಚನೆಗಳಿಗೆ ಅಕ್ಷರದ ಸ್ಪರ್ಶ ನೀಡಿ ಕೇಳುಗರನ್ನು ಭಾವಾಂತರಾಳಕ್ಕೆ ಕೊಂಡೊಯ್ದರು.
ಹಿರಿ-ಕಿರಿಯ ಕವಿಗಳು ಕವನ ದಿನಾಚರಣೆ ಪ್ರಯುಕ್ತ ಪ್ರಸ್ತುತ ಪಡಿಸಿದ ಕವನದ ಪ್ರತಿಯೊಂದು ಸಾಲುಗಳು, ಕೇಳುಗರನ್ನು ಚಿಂತನಾಲೋಕಕ್ಕೆ ಕರೆದೊಯ್ದವು. ಬಹುತೇಕ ಕವಿಗಳು ಕವನ ಹುಟ್ಟುವ ಬಗೆ, ಸಾಮಾಜಿಕ, ರಾಜಕೀಯ, ದಿನನಿತ್ಯದ ಬದುಕು, ಮಹಿಳೆಯ ತೊಳಲಾಟ, ರೈತಾಪಿ ವರ್ಗದ ಕಷ್ಟ ಕಾರ್ಪಣ್ಯ, ಜನಪದದ ಪೋಷಣೆಗಳ ಬಗ್ಗೆ ಬೆಳಕು ಚೆಲ್ಲಿದರು.
ಕವನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸೀ ಸಂಸ್ಥೆಯ ಉಪಾಧ್ಯಕ್ಷೆ (ಕಾರ್ಯಕ್ರಮ ಅಧ್ಯಕ್ಷೆ) ಎಂ.ಎ. ರುಬೀನಾ ವಹಿಸಿದ್ದರೆ, ಜಾನಪದ ಪರಿಷತ್ನ ಸಾಹಿತ್ಯ ಘಟಕದ ಅಧ್ಯಕ್ಷ ನ.ಲ. ವಿಜಯ ಅವರು ಕಾರ್ಯಕ್ರಮ ಉದ್ಘಾಟಿಸಿ ಕವನ ವಾಚಿಸಿದರು. ಮುಖ್ಯ ಅತಿಥಿಗಳಾಗಿ ಜೇಸೀ ಸಂಸ್ಥೆಯ ಕಾರ್ಯದರ್ಶಿ ನೆಲ್ಸನ್, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಕೆ.ಎ. ಪ್ರಕಾಶ್, ಕಾರ್ಯಾಧ್ಯಕ್ಷ ಮುರುಳೀಧರ್ ಅವರುಗಳು ಭಾಗವಹಿಸಿದ್ದರು.
ಕವನ ಸಮ್ಮಿಲನ: ನಂತರ ನಡೆದ ಕವನ ಸಮ್ಮಿಲನದಲ್ಲಿ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪುರಸ್ಕೃತ ಜಲಾ ಕಾಳಪ್ಪ ಅವರು ತಮ್ಮ ಹನಿಗವನಗಳಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರ ಮೊಂಡುತನವನ್ನು ಚಿತ್ರಿಸುವ ಮೂಲಕ ಅಜ್ಞಾನದ ಆಟಗಳ ಬಗ್ಗೆ ಕುಹಕವಾಡಿದರು.
ಹಿರಿಯ ಕವಯಿತ್ರಿ ಸುಶೀಲ ಹಾನಗಲ್ ಅವರು ತಮ್ಮ ಕವನ ‘ಎಲ್ಲಿ ಹೋದರು’ ಮೂಲಕ ಈ ಹಿಂದೆ ಇದ್ದ ರೈತಾಪಿ ವರ್ಗದ ಜೀವನ ಕ್ರಮ, ಮೊಬೈಲ್ ಟವರ್ಗಳಿಂದಾಗಿ ಮಾಯವಾದ ಗುಬ್ಬಚ್ಚಿಗಳು, ರೆಸಾರ್ಟ್ಗಳ ನಿರ್ಮಾಣದಿಂದ ಬರಡಾದ ಹಸಿರಿನ ವನಸಿರಿ, ಪರಿಸರ ಬಗ್ಗೆ ಬೆಳಕು ಚೆಲ್ಲಿದರು. ವಸಂತಿ ಅವರು ಮಹಿಳೆ ಅಂದು-ಇAದು ಕವನದಲ್ಲಿ ಮಹಿಳೆಯರ ಸಾಧನೆಗಳನ್ನು ತೆರೆದಿಟ್ಟರು.
ಸುಮತಿ ಅವರು ‘ಕಲ್ಲು ಮನಸ್ಸು ಕರಗದೇ?’ ಕವನದಲ್ಲಿ ಮಹಿಳೆಯರನ್ನು ಮಹಿಳೆಯರೇ ತುಳಿಯುವ ವಿವಿಧ ಕುತಂತ್ರಗಳ ಬಗ್ಗೆ ಸಾತ್ವಿಕ ಸಿಡುಕು ಹೊರಹಾಕಿದರು. ಶರ್ಮಿಳಾ ರಮೇಶ್ ಅವರು ತಮ್ಮ ಕವನದಲ್ಲಿ ಹೆಣ್ಣಿನ ಜೀವನ, ದುಃಖ, ದುಮ್ಮಾನಗಳ ಬಗ್ಗೆ ಹಾಡಿನ ಮೂಲಕ ಪ್ರಸ್ತುತ ಪಡಿಸಿದರು. ದೀಪಿಕಾ ಸುದರ್ಶನ್ ಅವರು ರಕ್ಷಾಬಂಧನದ ವಿಷಯದಲ್ಲಿ ಕವನ ವಾಚಿಸಿ ಸಹೋದರತೆಯ ಸಾರವನ್ನು ಕೇಳುಗರಿಗೆ ತಿಳಿಸಿದರು.
ಸುಮನ ಗೌತಮ್ ಅವರು ‘ಫ್ಯಾನ್ ತಿರುಗುತ್ತಿಲ್ಲ’ ಕವನದಲ್ಲಿ ನಿರ್ಭಯಾ ಅತ್ಯಾಚಾರಿಗಳನ್ನು ಬೊಟ್ಟು ಮಾಡುತ್ತಲೇ, ಸಮಾಜದಲ್ಲಿ ಹೆಣ್ಣು ಅನುಭವಿಸುತ್ತಿರುವ ದೌರ್ಜನ್ಯಗಳಿಗೆ ಕಾರಣರಾದ ಎಲ್ಲರಿಗೂ ಘನಘೋರ ಶಿಕ್ಷೆಯಾಗ ಬೇಕೆಂದು ಆಗ್ರಹಿಸಿದರು. ಕಿರಗಂದೂರಿನ ಮಹೇಶ್ ತಿಮ್ಮಯ್ಯ ಅವರು ರೈತಾಪಿ ವರ್ಗದ ಜೀವನವನ್ನು ‘ನೆಲದ ನಂಟು’ ಕವನದ ಸಾಲುಗಳಲ್ಲಿ ಹಿಡಿದಿಟ್ಟರು.
ಅಶ್ವಿನಿ ಕೃಷ್ಣಕಾಂತ್ ಅವರು ‘ನಾನು’ ಕವನದಲ್ಲಿ ಮಾನವನ ಅಹಂಕಾರದ ಫಲಗಳು, ಅಪಾಯಗಳ ಬಗ್ಗೆ ಬೆಳಕು ಚೆಲ್ಲಿದರು. ಬಾಲ ಪ್ರತಿಭೆ ರಾಜೇಶ್ ತನ್ನ ಕವನದಲ್ಲಿ ಮರ ಗಿಡಗಳನ್ನು ಕಡಿಯದಿರಿ, ಪ್ರಕೃತಿಯನ್ನು ಉಳಿಸಿದರೆ ಮಾತ್ರ ಮಾನವ ಕುಲಕ್ಕೆ ಭವಿಷ್ಯ ಎಂದು ಕರೆ ನೀಡಿದನು. ಕವಯಿತ್ರಿ ಜಲಜಾಕ್ಷಿ ಅವರು ‘ಹೇಳಲಾಗದ ಬದುಕಿನ ಜಂಜಾಟ’ ಕವನದಲ್ಲಿ ಮಹಿಳೆಯರು ಇಂದಿಗೂ ಅನುಭವಿಸುತ್ತಿರುವ ಬದುಕಿನ ತೊಳಲಾಟಗಳಿಗೆ ಅಕ್ಷರದ ರೂಪ ನೀಡಿದ್ದರು.
ಸಂಧ್ಯಾ ಕೃಷ್ಣಪ್ಪ ಅವರು ‘ಮಾಯೆ’ ಕವನದಲ್ಲಿ ಮಾನವನ ಆಸೆ, ದುರಾಸೆ, ಆಲೋಚನೆಗಳನ್ನು ಪ್ರಕೃತಿಯ ವಿವಿಧ ಸೃಷ್ಟಿಗೆ ಹೋಲಿಸಿ ಮಾನವ ಪ್ರಕೃತಿಯ ಎದುರು ಕುಬ್ಜ ಎಂಬುದನ್ನು ಪ್ರತಿಪಾದಿಸಿದರು. ರಾಣಿ ರವೀಂದ್ರ ಅವರು ‘ಅವ್ವ’ ಕವನದಲ್ಲಿ ತಾಯಿಯ ಮೌಲ್ಯಕ್ಕೆ ಬೆಲೆಕಟ್ಟ ಲಾಗದ್ದನ್ನು ಕವನದ ಸಾಲುಗಳ ಮೂಲಕ ಪ್ರಸ್ತುತಪಡಿಸಿದರು. ಕೆ.ಪಿ. ಸುದರ್ಶನ್ ಅವರು ‘ಹಳ್ಳಿ ಸೊಗಡು’ ಕವನದಲ್ಲಿ ಹಳ್ಳಿ ಹಾಗೂ ಪಟ್ಟಣದ ಬದುಕಿನ ನಡುವಿನ ಬದಲಾವಣೆ, ಗ್ರಾಮೀಣ ರೈತರು ತಮ್ಮ ಜೀವನ ವನ್ನು ಆಸ್ವಾದಿಸುತ್ತಿದ್ದ ಕ್ಷಣಗಳನ್ನು ಮೆಲುಕು ಹಾಕಿದರು.
ಕಾರ್ಯಕ್ರಮವನ್ನು ಜೇಸೀ ಸಂಸ್ಥೆಯ ಜ್ಯೋತಿ ರಾಜೇಶ್, ಸುಮಾ ನಿರಂಜನ್, ಜಾನಪದ ಪರಿಷತ್ನ ಪದಾಧಿಕಾರಿಗಳಾದ ಶರ್ಮಿಳಾ ರಮೇಶ್, ರಾಣಿ ರವೀಂದ್ರ, ದೀಪಿಕ ಸುದರ್ಶನ್, ಕೆ.ಎನ್. ದೀಪಕ್, ನಳಿನಿ ಗಣೇಶ್, ರೇಣುಕಾ ವೆಂಕಟೇಶ್ ಅವರುಗಳು ನಿರ್ವಹಿಸಿದರು.