
ವೀರಾಜಪೇಟೆ, ಮಾ. ೨೩: ಆತ ಕಳ್ಳತನ ಪ್ರಕರಣಗಳಲ್ಲಿ ಬಂಧನವಾಗಿ ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದಿದ್ದ. ಮಾಡಿದ ತಪ್ಪಿಗೆ ಶಿಕ್ಷೆಯಾಗಿತ್ತು. ಇನ್ನೇನೂ ಅಪರಾಧಗಳೆನ್ನೆಲ್ಲ ತ್ಯಜಿಸಿ ಒಳ್ಳೆ ಬದುಕು ಕಟ್ಟಿಕೊಳ್ಳುತ್ತಾನೆ. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕುತ್ತಾನೆ ಎಂದು ಅಂದುಕೊಳ್ಳುವಷ್ಟರಲ್ಲಿ ಜೈಲಿನಿಂದ ಬಿಡುಗಡೆಯಾದ ಕೆಲಗಂಟೆಯಲ್ಲೇ ತನ್ನ ಕಳ್ಳತನ ಕೆಲಸವನ್ನು ಮುಂದುವರೆಸಿದ್ದಾನೆ.ಕೊಡಗಿನ ವಿವಿಧ ಭಾಗಗಳಲ್ಲಿ ಹಲವು ಕಳವು ಪ್ರಕರಣದ ಆರೋಪಿಯಾಗಿದ್ದ ವೀರಾಜಪೇಟೆ ನಗರದ ಅರಸುನಗರದ ನಿವಾಸಿಮೊದಲ ಪುಟದಿಂದ) ಕಾರ್ತಿಕ್ (೩೦) ಕಲಿತ ಬುದ್ಧಿಯನ್ನು ಬಿಡದೆ ಪುನಃ ಕಳ್ಳತನಕ್ಕಿಳಿದು ಇದೀಗ ಮತ್ತೆ ಪೊಲೀಸರ ಬಲೆಗೆ ಸಿಲುಕಿದ್ದಾನೆ.ಘಟನೆ ಹಿನ್ನೆಲೆ: ಆರೋಪಿ ಕಾರ್ತಿಕ್ ಅಮ್ಮತ್ತಿ ಗ್ರಾಮದ ಪುರೋಹಿತರೊಬ್ಬರ ಮನೆಯಲ್ಲಿ ಕಳ್ಳತನ ಮಾಡಿ ಜೈಲುವಾಸ ಅನುಭವಿಸಿ ತಾ. ೧೯ ರಂದು ಬೆಳಿಗ್ಗೆ ಕೊಡಗು ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾಗಿದ್ದ ಎಂದು ಪೊಲೀಸ್ ಮೂಲಗÀಳಿಂದ ತಿಳಿದು ಬಂದಿದೆ.
ಬಿಡುಗಡೆಯಾದ ದಿನದ ರಾತ್ರಿಯಂದು ವೀರಾಜಪೇಟೆ ತಾಲೂಕಿನ ಕದನೂರು ಗ್ರಾಮದ ಶ್ರೀ ಭಗವತಿ ದೇವಾಸ್ಥಾನದ ಭಂಡಾರವನ್ನು ಕಬ್ಬಿಣದ ಸಲಾಕೆಯಿಂದ ಒಡೆದು ಭಂಡಾರದಲ್ಲಿದ್ದ ಹಣವನ್ನು ಆರೋಪಿ ಕದ್ದೊಯ್ದಿದ್ದಾನೆ.
ತಾ. ೨೦ ರ ಬೆಳಿಗ್ಗೆ ದೇವಾಲಯಕ್ಕೆ ಆಗಮಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ನಂತರ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಕೆ. ಪ್ರಶಾಂತ್ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಸಂಬAಧ ದೂರು ದಾಖಲಿಸಿದ್ದಾರೆ. ತಿಂಗಳ ಪ್ರತಿ ೫ನೇ ತಾರೀಕಿನಂದು ಭಂಡಾರ ತೆಗೆಯುವುದು ವಾಡಿಕೆಯಾಗಿದ್ದು, ಈ ಆಧಾರದಲ್ಲಿ ಸುಮಾರು ೮ ರಿಂದ ೧೦ ಸಾವಿರ ನಗÀದು ಇರಬಹುದು ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದರು.
ತನಿಖೆ ಆರಂಭಿಸಿದ ಪೊಲೀಸರು ಪ್ರಕರಣ ಭೇದಿಸಲು ಪ್ರತ್ಯೇಕ ತಂಡ ರಚನೆ ಮಾಡಿ ದೇಗುಲದಲ್ಲಿ ಅಳವಡಿಸಲಾಗಿರುವ ಸಿ.ಸಿ ಕ್ಯಾಮರಾ ದೃಶ್ಯಗಳ ಆಧಾರದಲ್ಲಿ ತನಿಖೆ ಕೈಗೊಂಡಿದ್ದರು. ಎಲ್ಲಾ ಮಾಹಿತಿಯನ್ನು ಕಲೆಹಾಕಿದ ಪೊಲೀಸರು ತಾ.೨೨ ರಂದು ಗುಮಾನಿಯ ಮೇಲೆ ಕಾರ್ತಿಕ್‌ನನ್ನು ದೂರು ಪಡೆದ ೪೮ ಗಂಟೆಯಲ್ಲಿ ಬಂಧಿಸಿದರು. ತನಿಖೆಯ ವೇಳೆಯಲ್ಲಿ ಭಂಡಾರವನ್ನು ಕಳ್ಳತನ ಮಾಡಿರುವುದಾಗಿ ಆರೋಪಿ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಕಳ್ಳತನ ಮಾಡಿದ ಹಣದಲ್ಲಿ ರೂ ೫,೬೦೦ ಮೌಲ್ಯದ ಹೊಸ ಮೊಬೈಲ್‌ನ್ನು ಆರೋಪಿ ಖರೀದಿಸಿದ್ದಾನೆ. ಇದರ ರಶೀದಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಉಳಿದ ಹಣವನ್ನು ಖರ್ಚು ಮಾಡಿ ೭೦೦ ರೂಪಾಯಿಯನ್ನು ಮಾತ್ರ ಉಳಿಸಿಕೊಂಡಿದ್ದ. ಇದೀಗ ಆರೋಪಿ ಬಳಿಯಿಂದ ಒಂದು ಹೊಸ ಮೊಬೈಲ್ ಮತ್ತು ೭೦೦ ರೂ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿತನ ಮೇಲೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿ ಮುಂದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ವೀರಾಜಪೇಟೆ ಉಪ ವಿಭಾಗ ಡಿ.ವೈ.ಎಸ್ಪಿ. ಸಿ.ಟಿ. ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕ ಶ್ರೀಧರ್ ಅವರ ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಿದ್ದಲಿಂಗ ಬಾಣಸೆ, ಎ.ಎಸ್.ಐ. ಶ್ರೀಧರ್, ಗ್ರಾಮಾಂತರ ಅಪರಾಧÀ ಪತ್ತೆ ದಳದ ಸಿಬ್ಬಂದಿಗಳಾದ ತೀರ್ಥಕುಮಾರ್ ಎ.ಬಿ, ನೆಹರು ಕುಮಾರ್ ಕೆ.ಸಿ, ಪ್ರದೀಪ್ ಇದ್ದರು.
-ವರದಿ : ಕೆ.ಕೆ.ಎಸ್.