ಮಡಿಕೇರಿ, ಮಾ. ೨೩: ಮಡಿಕೇರಿ ನಗರದ ಹಲವು ಪ್ರದೇಶಗಳಿಗೆ ನೀರು ಪೂರೈಸುವ ಪ್ರಮುಖ ಜಲಮೂಲಗಳಲ್ಲಿ ಒಂದಾಗಿರುವ ರೋಷನಾರ ಕೆರೆ ಬಳಿ ಖಾಸಗಿ ಜಾಗದಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆ ಇಂದು ಸಂಜೆ ಕುಸಿದು ಬಿದ್ದಿದೆ. ಇದರಿಂದ ಲೋಡ್‌ಗಟ್ಟಲೆ ಮಣ್ಣು ಜಲಮೂಲ ಸೇರುವಂತಾಗಿದ್ದು, ನೀರು ಪೂರೈಕೆಗೆ ವ್ಯತ್ಯಯವಾಗುವ ಅಪಾಯ ಎದುರಾಗಿದೆ. ಈ ಬಗ್ಗೆ ನಗರಸಭೆ ತ್ವರಿತವಾಗಿ ಗಮನ ಹರಿಸಿ ವ್ಯವಸ್ಥೆ ಸರಿಪಡಿಸುವಂತೆ ನಗರಸಭಾ ಮಾಜಿ ಸದಸ್ಯ ಚುಮ್ಮಿದೇವಯ್ಯ ಆಗ್ರಹಿಸಿದ್ದಾರೆ.

ಮಡಿಕೇರಿ ನಗರದ ಪ್ರಮುಖ ಜಲ ಮೂಲಗಳಲ್ಲಿ ಒಂದಾದ ರೋಷನಾರ ಜಲಮೂಲದ ಬಳಿ ಖಾಸಗಿ ವ್ಯಕ್ತಿಗಳಿಗೆ ಸೇರಿದ ಜಾಗದಲ್ಲಿ ಕಳೆದ ಎರಡೂವರೆ ವರ್ಷಗಳ ಹಿಂದೆ ಕಟ್ಟಡ ಕಾಮಗಾರಿ ಸಮಯದಲ್ಲಿ ನೆಲ ಸಮತಟ್ಟು ಮಾಡಿ ಜಾಗಕ್ಕೆ ಮಣ್ಣು ಸುರಿಯಲಾಗಿತ್ತು. ಜಲ ಮೂಲಕ್ಕೆ ದಕ್ಕೆ ಉಂಟಾಗುತ್ತದೆ ಎಂದು ಆಕ್ಷೇಪಿಸಿ ಸಂಬAಧಪಟ್ಟ ಆಯುಕ್ತರ ಗಮನಕ್ಕೆ ತರಲಾಗಿತ್ತು. ಸದರಿ ಸ್ಥಳದ ಮಾಲೀಕರಿಗೆ ತಡೆಗೋಡೆ ಕಟ್ಟುವಂತೆ ನಗರಸಭೆಯಿಂದ ನಿರ್ದೇಶಿಸಲಾಗಿತ್ತು. ಇದರಂತೆ ಅವರು ತಡೆಗೋಡೆ ನಿರ್ಮಾಣ ಮಾಡಿದ್ದರು. ಆದರೆ ಕಟ್ಟಿದ ತಡೆಗೋಡೆಯ ಕೆಲಸದ ಗುಣಮಟ್ಟದ ಬಗ್ಗೆ ಸಂಬAಧಪಟ್ಟವರು ಗಮನ ಹರಿಸದಿರುವುದು ಹಾಗೂ ಖಾಸಗಿ ಜಾಗದಲ್ಲಿ ವಿಪರೀತ ಮಣ್ಣನ್ನು ಲೋಡುಗಟ್ಟಲೆ ಸುರಿದಿರುವುದರಿಂದ ಇಂದು ಸಾಯಂಕಾಲ ನಾಲ್ಕು ಗಂಟೆಗೆ ತಡೆಗೋಡೆ ಸಂಪೂರ್ಣವಾಗಿ ಕುಸಿದು ಹೋಗಿದ್ದು ಹಾಕಿದ್ದ ಮಣ್ಣೆಲ್ಲ ಜಲ ಮೂಲಕ್ಕೆ ಸೇರಿದೆ. ನೂರಾರು ಲೋಡ್ ಮಣ್ಣನ್ನು ಸುರಿದಿರುವುದರಿಂದ ತಡೆಗೋಡೆ ಸಂಪೂರ್ಣ ಕುಸಿದು ಹೋಗಿದ್ದು, ಮುಂದಿನ ದಿನಗಳಲ್ಲಿ ಜಲಮೂಲ ಸಂಪೂರ್ಣ ಕಲುಷಿತಗೊಂಡು ಸಾರ್ವಜನಿಕರಿಗೆ ಕುಡಿಯಲು ಕೂಡ ಯೋಗ್ಯವಲ್ಲದ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆಯಿದೆ. ಮಡಿಕೇರಿ ನಗರದ ಜಿಲ್ಲಾಸ್ಪತ್ರೆಗೆ, ಸುದರ್ಶನ ಬಡಾವಣೆ, ಅಶೋಕಪುರ, ಮಂಗಳಾದೇವಿನಗರ, ಮೈಸೂರು ರಸ್ತೆ, ಚೈನ್‌ಗೇಟ್ ಬಡಾವಣೆಗೆ ಸರಬರಾಜಾಗುವ ನೀರಿನ ಮೂಲ ಈ ರೋಷನಾರ ಕೆರೆ. ಮುಂದೆ ಮಳೆ ಬಂದರೆ ಮೇಲಿರುವ ಸಂಪೂರ್ಣ ಮಣ್ಣು ಜಲಮೂಲಕ್ಕೆ ಸೇರಿ ಜಲಮೂಲವೇ ಬತ್ತಿ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಒಂದೆಡೆ ಅವೈಜ್ಞಾನಿಕವಾಗಿ ಮಣ್ಣನ್ನು ಸುರಿದು ತುಂಬಿರುವುದರಿAದ ಹಾಗೂ ಅಕ್ಕಪಕ್ಕದಲ್ಲಿ ನಡೆಯುತ್ತಿರುವ ಕಾಮಗಾರಿ ಮಣ್ಣು ಕೂಡ ಇಲ್ಲಿ ತಂದು ಸುರಿಯುತ್ತಿರುವುದರಿಂದ ಈ ಘಟನೆ ನಡೆದಿದ್ದು, ಸಂಬAಧಪಟ್ಟ ಅಧಿಕಾರಿಗಳು ಇಂತಹ ಕೆಲಸ ನಡೆಯುತ್ತಿದ್ದರೂ ಕೈಕಟ್ಟಿ ಕುಳಿತಿರುವುದು ವಿಷಾದನೀಯ. ಜಿಲ್ಲಾಧಿಕಾರಿಯವರು ಘಟನೆಯ ಸ್ಥಳಕ್ಕೆ ಖುದ್ದಾಗಿ ತೆರಳಿ ಪರಿಶೀಲಿಸಿ ಸಂಬAಧಪಟ್ಟವರಿಗೆ ಸೂಕ್ತ ಕ್ರಮಕ್ಕೆ ಆದೇಶಿಸಬೇಕಾಗಿ ಚುಮ್ಮಿದೇವಯ್ಯ ಆಗ್ರಹಿಸಿದ್ದಾರೆ.