*ಗೋಣಿಕೊಪ್ಪ, ಮಾ. ೨೧: ನೊಖ್ಯ ದೇವರಕಾಡು ಪೈಸಾರಿ ನಿವಾಸಿಗಳಿಗೆ ರಸ್ತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವಂತೆ ತಿತಿಮತಿ ಗ್ರಾಮ ಪಂಚಾಯಿತಿಗೆ ಮನವಿ ಪತ್ರ ಸಲ್ಲಿಸಿ ಕರ್ನಾಟಕ ಮಾನವ ಹಕ್ಕುಗಳ ಜನ ಜಾಗೃತಿ ವೇದಿಕೆಯ ರಾಜ್ಯ ಮಾಧ್ಯಮ ಘಟಕದ ವತಿಯಿಂದ ಒತ್ತಾಯಿಸಲಾಯಿತು.

ರಾಜ್ಯಧ್ಯಕ್ಷ ಕೆ.ಟಿ. ಶ್ರೀನಿವಾಸ್ ನೇತೃತ್ವದಲ್ಲಿ ಮನವಿ ಸಲ್ಲಿಸಿ ತಿತಿಮತಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ದೇವರಕಾಡು ಪೈಸಾರಿ ಪ್ರದೇಶದಲ್ಲಿ ಸುಮಾರು ೩೦ ಕುಟುಂಬಗಳು ವಾಸವಿದ್ದು ಅವರಿಗೆ ಹಲವು ವರ್ಷಗಳಿಂದ ತಿರುಗಾಡಲು ಸಂಪರ್ಕ ರಸ್ತೆ, ಕುಡಿಯುವ ನೀರು ಸೇರಿದಂತೆ ಹಲವು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂಬುದನ್ನು ಗಂಭೀರವಾಗಿ ಪರಿಗಣಿಸಿ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.

ಮನವಿಯನ್ನು ಪರಿಗಣಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತಾ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಕಾಡು ಪೈಸಾರಿ ಪ್ರದೇಶದಲ್ಲಿ ಸುಮಾರು ೩೦ ಕುಟುಂಬಗಳು ವಾಸವಿದ್ದು ಅವರಿಗೆ ಹಲವು ವರ್ಷಗಳಿಂದ ತಿರುಗಾಡಲು ಸಂಪರ್ಕರಸ್ತೆ ಇರುವುದಿಲ್ಲ ಎಂಬದು ಪರಿಗಣನೆಗೆ ಬಂದಿದೆ. ಈಗಾಗಲೇ ಗ್ರಾಮ ಪಂಚಾಯಿತಿ ವತಿಯಿಂದ ಸಂಪರ್ಕ ರಸ್ತೆಗಾಗಿ ಪ್ರಯತ್ನಿಸಲಾಗುತ್ತಿದೆ.

ದೇವರು ಕಾಡು ಪ್ರದೇಶವಾಗಿರುವುದರಿಂದ ಮತ್ತು ಅಲ್ಲಿನ ಸುತ್ತಮುತ್ತಲಿನ ತೋಟದ ಮಾಲೀಕರು ರಸ್ತೆ ಅಭಿವೃದ್ಧಿಗೆ ಜಾಗ ಬಿಟ್ಟುಕೊಡಲು ಹಿಂದೇಟು ಹಾಕುತ್ತಿದ್ದರು. ಈ ಹಿಂದೆ ಇದ್ದಂತಹ ತಹಶೀಲ್ದಾರರು ಮತ್ತು ಉಪವಿಭಾಗಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು ಈಗಾಗಲೇ ಗ್ರಾಮ ಪಂಚಾಯಿತಿ ವತಿಯಿಂದ ರಸ್ತೆ ಅಭಿವೃದ್ಧಿಗಾಗಿ ಪ್ರಯತ್ನಿಸಲಾಗುತ್ತಿದೆ. ಕೂಡಲೇ ಅಲ್ಲಿನ ನಿವಾಸಿಗಳಿಗೆ ರಸ್ತೆ ಅಭಿವೃದ್ಧಿ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ, ಉಪಾಧ್ಯಕ್ಷ ಅನೂಪ್ ಕುಮಾರ್, ಕರ್ನಾಟಕ ಮಾನವ ಹಕ್ಕುಗಳ ಜನ ಜಾಗೃತಿ ವೇದಿಕೆಯ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಪಿ. ಶಿವಕುಮಾರ್, ಗೋಣಿಕೊಪ್ಪ ನಗರಾಧ್ಯಕ್ಷೆ ಫಿಲೋಮಿನಾ, ಪ್ರಮುಖರಾದ ಫಾತಿಮಾ, ಮಣಿ ಹಾಜರಿದ್ದರು

-ಎನ್.ಎನ್. ದಿನೇಶ್