ಜಲ ಜಗತ್ತಿಗೂ, ಜೀವಜಗತ್ತಿಗೂ ಅವಿನಾಭಾವ ಸಂಬAಧ ಇದೆ. ಪ್ರಕೃತಿಯ ಸೃಷ್ಟಿಯಲ್ಲಿ ಜಲ ಸೃಷ್ಟಿಯೂ ಒಂದು. ರುದ್ರ, ರಮಣೀಯ, ಮನೋಹರ, ಶಾಂತ, ಸ್ವಭಾವದಿಂದ ಜುಳು ಜುಳು ನಿನಾದದಲ್ಲಿ ಹರಿಯುವ ಜಲರಾಶಿ ಪ್ರಕೃತಿಯ ಒಂದು ಅದ್ಭುತ ಕೊಡುಗೆಯಾಗಿದೆ.

ಇತಿಹಾಸವನ್ನು ಕೆದಕಿದಾಗ ಪ್ರತಿಯೊಂದು ನಾಗರಿಕತೆಗಳ ಉಗಮಸ್ಥಾನವೇ ನದಿ ದಂಡೆ. ಎಲ್ಲಿ ನೀರು ಇಲ್ಲವೋ, ಅಲ್ಲಿ ಜೀವನವಿಲ್ಲ. ಜಲರಾಶಿ ಕೇವಲ ಮನುಕುಲದ ಸಂಪತ್ತಲ್ಲ, ಇಡೀ ಜೀವಸಂಕುಲದ ಸಂಪತ್ತಾಗಿದೆ. ಸೃಷ್ಟಿಯ ಪ್ರತಿಜೀವಿಗೂ ಜಗತ್ತಿನಲ್ಲಿ ಬದುಕುವ ಹಕ್ಕಿದೆ. ಜಲ ಸಂಪತ್ತು ಪ್ರತಿ ಜೀವಿಗಳ ಆಸ್ತಿಯಾಗಿರುವಾಗ ಕೇವಲ ಮನುಷ್ಯ ಮಾತ್ರ ಜಲ ಶಕ್ತಿಯ ಮೇಲೆ ಸಾರ್ವಭೌಮತ್ವವನ್ನು ಸ್ಥಾಪಿಸುವುದು ಎಷ್ಟು ಸರಿ? ಹಾಗಾಗಿ ಮನುಷ್ಯ ನೀರನ್ನು ಬಳಸುವಾಗ ಅದನ್ನು ದುರ್ಬಳಕೆ ಮಾಡಿಕೊಳ್ಳುವಾಗ ಯೋಚನೆ ಮಾಡಲೇ ಬೇಕು. "ಶುದ್ಧ ಜಲಂ ಸರ್ವರೋಗ ನಿವಾರಣಂ" ವೈದ್ಯರು ಹೇಳುವಂತೆ ಮನುಷ್ಯನ ಎಲ್ಲಾ ಭೀಕರ ಕಾಯಿಲೆಗಳಿಗೂ ಕಲುಷಿತಗೊಂಡ ನೀರೇ ಕಾರಣವಾಗುತ್ತದೆ.

ನೀರು ಕಲುಷಿತಗೊಳ್ಳಲು ಮನುಷ್ಯನ ದುರ್ನಡತೆಯೇ ಆಗಿದೆ. ಜಲವನ್ನು ಶುದ್ಧವಾಗಿ ಪವಿತ್ರವಾಗಿ ಇಡುವುದು ಪ್ರತಿಯೊಂದು ಜೀವಿಯ ಕರ್ತವ್ಯವಾಗಿದೆ. ಶೇ. ೭೧ ರಷ್ಟು ನೀರು ಭೂಭಾಗವನ್ನು ಆವರಿಸಿ ಕೊಂಡಿದ್ದರೂ ಬಳಸಲು ಯೋಗ್ಯವಾದ ನೀರು ಶೇ. ೧ ರಷ್ಟು ಮಾತ್ರ. ಅದನ್ನೂ ಸಹ ಮನುಷ್ಯ ಸರಿಯಾಗಿ ಬಳಸಿಕೊಳ್ಳದಿದ್ದರೆ ಮುಂದೊAದು ದಿನ ಇಡೀ ಜೀವಸಂಕುಲವೇ ಅಪಾಯದ ದವಡೆಗೆ ಸಿಲುಕಿಕೊಳ್ಳಬೇಕಾದ ಅನಿವಾರ್ಯತೆ ಬರುತ್ತದೆ. ಪ್ರಕೃತಿ ಮಾತೆಯು ತನ್ನ ಮಕ್ಕಳನ್ನು ತನ್ನ ಮಡಿಲಿನಲ್ಲಿ ಚಳಿ-ಮಳೆ-ಗಾಳಿಯಿಂದ ಸುರಕ್ಷಿತವಾಗಿ ಪೋಷಿಸಿ ನೋವು, ದುಃಖವನ್ನು ಅರಗಿಸಿಕೊಂಡು ನಲಿವು ಸುಖವನ್ನು ಅನಾದಿಕಾಲದಿಂದಲೂ ಮಕ್ಕಳಿಗೆ ಧಾರೆ ಎರೆಯುತ್ತಾ ಬಂದಿದ್ದಾಳೆ. ಆದರೆ ಮನುಷ್ಯ ಆಧುನಿಕತೆಯ ಹೆಸರಿನಲ್ಲಿ, ಅಭಿವೃದ್ಧಿಯ, ಸುಖಮಯ ಜೀವನದ ಹೆಸರಿನಲ್ಲಿ ಹೆತ್ತತಾಯಿಯ ಸ್ವರೂಪವನ್ನು ನಗ್ನ ಮಾಡುತ್ತಿದ್ದಾನೆ.

ಪ್ರಕೃತಿಮಾತೆಯ ಚೆಲುವಿನ ಸೌಂದರ್ಯವರ್ಧಕವೇ ಈ ಜಲರಾಶಿ. ಭೂಭಾಗದಲ್ಲಿ ನೀರಿನ ಪ್ರಮಾಣ ನಿರಂತರವಾಗಿ ಕಡಿಮೆಯಾಗುತ್ತಾ ಬರುತ್ತಿದೆ. ಇದಕ್ಕೆಲ್ಲ ಮನುಕುಲದ ಲೋಲುಪವೇ ಕಾರಣ. ಒಬ್ಬ ಜನಸಾಮಾನ್ಯನಾಗಿ ಯೋಚಿಸಿದಾಗ ಹಿಂದಿನ ಕಾಲದ ಮಳೆಗಾಲಕ್ಕೂ ಪ್ರಸ್ತುತ ದಿನಗಳ ಮಳೆಗಾಲಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ೨೦-೨೫ ವರ್ಷಗಳ ಹಿಂದಿನ ಜೀವನ ಪದ್ಧತಿಯನ್ನು ಮೆಲುಕು ಹಾಕುತ್ತಾ ನೋಡಿದಾಗ ಆಗಿನ ನೀರಿನ ಬಳಕೆ ಇತಿ-ಮಿತಿಯಾಗಿತ್ತು. ಈಗ ಮನುಷ್ಯ ತನ್ನ ಸುಖಮಯ ಜೀವನದ ಹೆಸರಿನಲ್ಲಿ, ಆಧುನಿಕ ತಂತ್ರಜ್ಞಾನದ ಹೆಸರಿನಲ್ಲಿ, ಪ್ರತಿ ಮನೆ-ಮನೆಗಳಿಗೂ ಕೂಡ ಬೋರ್‌ವೆಲ್‌ಗಳನ್ನು ಹಾಕಿಸುತ್ತಿದ್ದಾರೆ. ವೈಜ್ಞಾನಿಕ ಬೇಸಾಯದ ಉದ್ದೇಶದಿಂದ, ಇಳುವರಿಯನ್ನು ಹೆಚ್ಚಿಸುವ ಆತುರತೆಯಿಂದ ರೈತರು ತಮ್ಮ ತಮ್ಮ ಜಮೀನುಗಳಲ್ಲಿಯೂ ಬೋರ್‌ವೆಲ್‌ಗಳ ಬಳಕೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಲೇ ಇದ್ದಾರೆ. ಭೂ ತಾಯಿಯ ಗರ್ಭವನ್ನು ನಿರಂತರವಾಗಿ ಕೊರೆಯುತ್ತಿರುವ ಕಾರಣ ಭೂ ತಾಯಿಯ ಒಡಲು ಒಣಗಿ ಅಂತರ್ಜಲ ಬರಿದಾ ಗುತ್ತಿದೆ. ಭೂತಾಯಿಯ ಒಡಲಿನಲ್ಲಿ ಬನಿ (ತೇವಾಂಶ)ಯೇ ಇಲ್ಲದಂತಾಗಿದೆ. ಅಷ್ಟೇ ಅಲ್ಲದೆ ಮರಗಳ ನಿರಂತರ ನಾಶದಿಂದ ಭೂತಾಯಿಯು ಶಕ್ತಿಹೀನಳಾಗಿದ್ದಾಳೆ. ಜಲ ಎಂದರೆ ಕೇವಲ ನೀರು ಎಂದರ್ಥ. ಅದು ನಮ್ಮ ಉಸಿರು, ನಮ್ಮ ಪ್ರಾಣ, ನಮ್ಮ ಸರ್ವವೂ ಅದೇ ಆಗಿರುತ್ತದೆ. ಪ್ರಕೃತಿ ಮಾತೆ ಸಹನಾಮೂರ್ತಿ. ತನ್ನ ಮಕ್ಕಳು ಕೊಡುವ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ಮಕ್ಕಳ ಹಿತವನ್ನೇ ಬಯಸುತ್ತಿದ್ದಳು. ಆದರೆ ಸಹಿಸುವಿಕೆಗೆ ಒಂದು ಮಿತಿ ಇರುತ್ತದೆ. ನಿರಂತರ ಶೋಷಣೆಗೆ ಒಳಗಾಗುತ್ತಿದ್ದರೆ ಯಾರಾದರೂ ಸಹ ತಿರುಗಿ ಬೀಳಬೇಕಾದ ಅನಿವಾರ್ಯತೆ ಬರುತ್ತದೆ. ಹೀಗೆಯೇ ನಿರಂತರವಾಗಿ ಮಾನವನ ನೀರಿನ ದುರ್ಬಳಕೆ ಹಾಗೂ ಜಲಮಾಲಿನ್ಯವನ್ನು ಮಾಡುತ್ತಿದ್ದರೆ ಪ್ರಸ್ತುತ ದಿನಗಳಲ್ಲಿ ಅನುಭವಿಸುತ್ತಿರುವ ಹಾಗೆ ಔಷಧಿ ಇಲ್ಲದ ಕಾಯಿಲೆಗಳಿಗೆ ತುತ್ತಾಗ ಬೇಕಾದ ಸಂಭವವೇ ಹೆಚ್ಚಾಗಿದೆ ಇಲ್ಲದಿದ್ದರೆ ಪ್ರಕೃತಿಯೇ ನಮ್ಮ ಈ ಅನಾಚಾರ, ಅಸಂಬದ್ಧ ಅವ್ಯವಹಾರಕ್ಕೆ ಲಗಾಮು ಹಾಕುತ್ತದೆ. ಇನ್ನು ಮುಂದೆಯಾದರೂ ಎಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ. ನೀರಿನ ಪ್ರತಿ ಹನಿಗೂ ನಾವು ಬೆಲೆ ಕಟ್ಟಬೇಕಾಗಿದೆ "ಜೀವಿ - ಜೀವ ರಕ್ಷಣಂ ಜಲ ಸಂರಕ್ಷಣA".

- ಕವಿತ ಪುಟ್ಟೇಗೌಡ ಹೆಬ್ಬಾಲೆ ಪ್ರೌಢಶಾಲೆ, ಹೆಬ್ಬಾಲೆ