ಸುನಿಲ್ ಪ್ರಶ್ನೆಗೆ ಮುಖ್ಯಮಂತ್ರಿ ಉತ್ತರ

ಮಡಿಕೇರಿ, ಮಾ. ೨೦: ರಾಜ್ಯ ಸರಕಾರದ ನೀತಿಯಂತೆ ರಾಜ್ಯದಲ್ಲಿನ ೧೦ ಹೆಚ್.ಪಿ ಮತ್ತು ಒಳಗಿನ ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ಎಲ್.ಟಿ. ೪ (ಎ) ತೆರಿಗೆ ಅಡಿಯಲ್ಲಿ ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಈ ಉಚಿತ ವಿದ್ಯುತ್ ಸರಬರಾಜಿಗೆ ತಗುಲುವ ವೆಚ್ಚವನ್ನು ಸರಕಾರ ಭರಿಸುತ್ತಿದ್ದು, ವೆಚ್ಚವನ್ನು ಆಯವ್ಯಯದಲ್ಲಿ ಹಂಚಿಕೆ ಮಾಡಿ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಒದಗಿಸಲಾಗುತ್ತಿದೆ ಎಂದು ಮೇಲ್ಮನೆಯಲ್ಲಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಪ್ರಶ್ನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉತ್ತರಿಸಿದರು.

ಕೊಡಗು ಜಿಲ್ಲೆಯಲ್ಲಿನ ರೈತರಿಗೆ ವಿದ್ಯುತ್ ಬಿಲ್ ಪಾವತಿಸುವಂತೆ ನೋಟೀಸ್ ನೀಡುತ್ತಿರುವುದರ ಬಗ್ಗೆ ಆಕ್ಷೇಪಿಸಿದ ಸುನಿಲ್ ಸುಬ್ರಮಣಿ ಅವರು ಸರಕಾರ ಕೈಗೊಂಡ ಕ್ರಮದ ಬಗ್ಗೆ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ, ರಾಜ್ಯದಲ್ಲಿ ವಿವಿಧ ಪ್ರವರ್ಗಗಳ ವಿದ್ಯುತ್ ಬಳಕೆಗೆ ತೆರಿಗೆ ನಿಗದಿಪಡಿಸುವುದು ಮತ್ತು ದರ ನಿಗದಿಪಡಿಸುವುದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ವ್ಯಾಪ್ತಿಗೆ ಒಳಪಡುತ್ತದೆ ಎಂದು ಮಾಹಿತಿ ಒದಗಿಸಿದರು.

ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಖಾಸಗಿ ತೋಟಗಾರಿಕೆ ನರ್ಸರಿಗಳು, ಕಾಫಿ, ಟೀ ಮತ್ತು ರಬ್ಬರ್ ಪ್ಲಾಂಟೇಷನ್‌ಗಳಲ್ಲಿ ಉಪಯೋಗಿಸುವ ಎಲ್ಲಾ ಸಾಮಾರ್ಥ್ಯದ ನೀರಾವರಿ ಪಂಪ್‌ಸೆಟ್‌ಗಳಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಆದೇಶಾನುಸಾರ ಮೊತ್ತ ಪಾವತಿಸುವಂತೆ ತಿಳಿಸಲಾಗುತ್ತಿದೆ ಎಂದು ಉತ್ತರಿಸಿದರು.