ಮಡಿಕೇರಿ, ಮಾ. ೨೦: ಮಣ್ಣಿನ ಪರೀಕ್ಷೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಲವಾರು ರಾಜ್ಯಗಳಲ್ಲಿ ಸ್ಥಳೀಯರ ಸಹಕಾರದಿಂದ ಸೈಕಲ್ ಜಾಥಾವನ್ನು ಕೃಷಿ ತಂತ್ರ ಸಂಸ್ಥೆ ಕೈಗೊಂಡಿದೆ ಎಂದು ಸಂಸ್ಥೆಯ ಮಾರಾಟ ವಿಭಾಗದ ಅಕ್ಷಯ್ ಅವರು ಹೇಳಿದರು. ನಗರಸಭೆ, ಗ್ರೀನ್‌ಸಿಟಿ ಫೋರಂ ಮತ್ತು ಕೃಷಿ ತಂತ್ರ ಸಂಯುಕ್ತ ಆಶ್ರಯದಲ್ಲಿ ಸ್ವಚ್ಚ ಮಡಿಕೇರಿ ಮತ್ತು ಮಣ್ಣು ಪರೀಕ್ಷಾ ಅಭಿಯಾನ ಪ್ರಯುಕ್ತ ರಾಜಾಸೀಟಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರು ಮಣ್ಣು ಪರೀಕ್ಷೆ ನಡೆಸಿ ಅದರ ಫಲಿತಾಂಶದ ಅನುಸಾರ ಗೊಬ್ಬರ ಬಳಕೆ ಮಾಡಿ ಮಣ್ಣಿನ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಬೇಕೆಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನ ಶೇಕ್ ಅವರು ಮಾತನಾಡಿ ಗಿಡಮರಗಳಂತೆ ಮಣ್ಣಿಗೂ ಜೀವವಿರುತ್ತದೆ. ಇದರ ಪೋಷಣೆಯನ್ನು ರೈತರು ಮಾಡಿದರೆ, ಗಿಡಗಳೂ ಕೂಡ ಅತ್ಯುತ್ತಮ ಫಲ ನೀಡುತ್ತವೆ. ಮಣ್ಣು ರಕ್ಷಣೆಯ ಕುರಿತು ಸರಕಾರದ ವತಿಯಿಂದಲೂ ಅರಿವು ಮೂಡಿಸಲಾಗುತ್ತಿದೆ. ಮಣ್ಣಿನ ಮಹತ್ವ ಉಳಿಯಬೇಕಿದ್ದರೆ, ಪ್ಲಾಸ್ಟಿಕ್ ನಂತಹ ಮಾರಕ ವಸ್ತುಗಳ ಬಳಕೆ ಕಡಿಮೆಮಾಡಬೇಕು. ಪ್ಲಾಸ್ಟಿಕ್ ಪದಾರ್ಥಗಳು ಮಣ್ಣಿಗೆ ಸೇರದ ಹಾಗೆ ನೋಡಿಕೊಳ್ಳಬೇಕೆಂದರು.ಪೌರಾಯುಕ್ತ ರಾಮ್‌ದಾಸ್ ಅವರು ಮಾತನಾಡಿ, ಇತರ ಜಿಲ್ಲೆಗಳ ನಗರ ಪ್ರದೇಶಗಳನ್ನು ಹೋಲಿಸಿದರೆ ಮಡಿಕೇರಿ ನಗರ ಶುಚಿತ್ವಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದೆ. ಸ್ವಚ್ಚ ಸರ್ವೇಕ್ಷಣಾ ತಂತ್ರಾAಶ ಮೂಲಕ ನಗರಸಭೆಗೆ ಮತ ನೀಡಿ ಸ್ವಚ್ಚ ನಗರ ಪ್ರಶಸ್ತಿ ಪಡೆಯಲು ಸಹಕರಿಸಬೇಕಾಗಿ ಕೋರಿದರು.

ಕ್ಲೀನ್ ಕೂರ್ಗ್ ಇನಿಷಿಯೇಟಿವ್‌ನ ಬಡುವಂಡ ಅರುಣ್ ಅಪ್ಪಚ್ಚು ಮಾತನಾಡಿ ಸ್ವಚ್ಚತೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಎಲ್ಲರ ಕರ್ತವ್ಯವಾಗಿದೆ. ಕೊಡಗನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ಸರ್ವರ ಸಹಕಾರ ಅಗತ್ಯ ಎಂದರು.ಕಾರ್ಯಕ್ರಮದಲ್ಲಿ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲೆ ಚಿತ್ರ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಶಶಿಧರ್, ಗ್ರೀನ್ ಸಿಟಿ ಫೋರಂನ ಮಾದೇಟಿರ ತಿಮ್ಮಯ್ಯ, ಚೈಯಂಡ ಸತ್ಯ, ಮೋಂತಿ ಗಣೇಶ್, ಅಂಬೆಕಲ್ ನವೀನ್, ಚಿನ್ನಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಚಿತ್ರಾ ವೈ. ಹಾಗೂ ಇತರರು ಹಾಜರಿದ್ದರು.

ಸೈಕಲ್ ಜಾಥಾ

ಕಾರ್ಯಕ್ರಮಕ್ಕೂ ಮೊದಲು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಿಂದ ಸ್ವಚ್ಛ ಸರ್ವೇಕ್ಷಣೆ'ಯ ೨೦೨೧ ರ ಅಂಗವಾಗಿ ಏರ್ಪಡಿಸಿದ ಸೈಕಲ್ ಜಾಥಾಕ್ಕೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಪಿ.ರಾಜು ಅವರು ಚಾಲನೆ ನೀಡಿದರು.

ಸೈಕಲ್ ಜಾಥಾ, ಹಳೆ ಖಾಸಗಿ ಬಸ್ ನಿಲ್ದಾಣದ ಮೂಲಕ ಚೌಕಿಗಾಗಿ ಕಾಲೇಜು ರಸ್ತೆಯ ಮೂಲಕ ಖಾಸಗಿ ಬಸ್ ನಿಲ್ದಾಣದ ಮುಖೇನ ರಾಜಾಸೀಟಿನಲ್ಲಿ ಸಮಾಪ್ತವಾಯಿತು. ಸಿ.ಸಿ.ಐ ಸದಸ್ಯರು , ಶಾಲಾ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಅನೇಕ ಮಂದಿ ಭಾಗವಹಿಸಿದ್ದರು.