ಕ್ರೀಡಾ ಸಚಿವರ ಮಾಹಿತಿ

ಮಡಿಕೇರಿ, ಮಾ. ೨೦: ವಾರ್ಷಿಕವಾಗಿ ಕೊಡಗಿನಲ್ಲಿ ಜರುಗುವ ಕೊಡವ ಕೌಟುಂಬಿಕ ಹಾಕಿ ಹಬ್ಬಕ್ಕೆ ವಾರ್ಷಿಕ ರೂ. ೫ ಕೋಟಿ ಅನುದಾನ ಒದಗಿಸುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಕಳುಹಿಸಲಾಗಿದ್ದು, ಪರಿಶೀಲನೆಯಲ್ಲಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣ ಗೌಡ ತಿಳಿಸಿದ್ದಾರೆ.

ಕ್ರೀಡಾ ಜಿಲ್ಲೆ ಕೊಡಗಿನಲ್ಲಿ ಪ್ರತಿ ವರ್ಷ ನಡೆಯುವ ಹಾಕಿ ಕ್ರೀಡೆಗೆ ರೂ. ೫ ಕೋಟಿ ಅನುದಾನ ನೀಡಬೇಕೆಂಬ ಬೇಡಿಕೆ ಸರಕಾರದ ಗಮನಕ್ಕೆ ಬಂದಿದೆಯೇ ಎಂದು ವಿಧಾನ ಪರಿಷತ್‌ನಲ್ಲಿ ಎಂಎಲ್‌ಸಿ ವೀಣಾಅಚ್ಚಯ್ಯ ಪ್ರಶ್ನಿಸಿದರು. ಮಾತ್ರವಲ್ಲದೇ ೨೦೨೧-೨೨ರ ಸಾಲಿನಿಂದ ೫ ಕೋಟಿ ಅನುದಾನವನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಮೂಲಕ ಸರಕಾರ ಬಿಡುಗಡೆ ಮಾಡಲಿದೆಯೇ ಎಂದು ಮಾಹಿತಿ ಬಯಸಿದರು.

ಇದಕ್ಕೆ ಉತ್ತರಿಸಿರುವ ಕ್ರೀಡಾ ಸಚಿವ ಡಾ. ನಾರಾಯಣ ಗೌಡ, ಕೊಡಗು ಕೌಟುಂಬಿಕ ಹಾಕಿ ಹಬ್ಬಕ್ಕೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮೂಲಕ ಗಣನೀಯ ಮೊತ್ತದ ಅನುದಾನ ಬಿಡುಗಡೆ ಮಾಡಲಾಗಿದೆ. ೨೦೧೧ರ ಮಚ್ಚಮಾಡ ಕಪ್‌ಗೆ ರೂ. ೨೫ ಲಕ್ಷ, ೨೦೧೨ರ ಐಚೆಟ್ಟೀರ ಕಪ್‌ಗೆ ರೂ. ೩೦ ಲಕ್ಷ, ೨೦೧೩ರ ಮಾದಂಡ ಕಪ್‌ಗೆ ರೂ. ೨೫ ಲಕ್ಷ, ೨೦೧೪ರ ತಾತಂಡ ಕಪ್‌ಗಾಗಿ ರೂ. ೩೦ ಲಕ್ಷ, ೨೦೧೫ರಲ್ಲಿ ನಡೆದ ಕುಪ್ಪಂಡ ಕಪ್‌ಗೆ ರೂ. ೩೫ ಲಕ್ಷ, ೨೦೧೬ರಲ್ಲಿ ನಡೆದ ಶಾಂತೆಯAಡ ಕಪ್‌ಗೆ ರೂ. ೩೦ ಲಕ್ಷ, ೨೦೧೭ರ ಬಿದ್ದಾಟಂಡ ಕಪ್‌ಗೆ ರೂ. ೨೦ ಲಕ್ಷ ಮತ್ತು ೨೦೧೮ರಲ್ಲಿ ಆಯೋಜಿಸಲಾಗಿದ್ದ ಕುಲ್ಲೇಟಿರ ಕಪ್‌ಗೆ ರೂ. ೨೫ ಲಕ್ಷಗಳನ್ನು ಮಂಜೂರು ಮಾಡಲಾಗಿದ್ದು, ನಿಯಮಾನುಸಾರ ಅನುದಾನ ಬಿಡುಗಡೆಗೆ ಕ್ರಮಕೈಗೊಳ್ಳಲಾಗಿದೆ. ಕೌಟುಂಬಿಕ ಹಾಕಿ ಹಬ್ಬಕ್ಕೆ ವಾರ್ಷಿಕ ರೂ. ೫ ಕೋಟಿ ಅನುದಾನ ಒದಗಿಸುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಕಳುಹಿಸಲಾಗಿದ್ದು, ಪರಿಶೀಲನೆಯಲ್ಲಿದೆ ಎಂದು ಸಚಿವ ಡಾ. ನಾರಾಯಣ ಗೌಡ ಸದನಕ್ಕೆ ಮಾಹಿತಿ ನೀಡಿದ್ದಾರೆ.