ಮಡಿಕೇರಿ, ಮಾ. ೧೯: ರಾಜ್ಯ ಸರ್ಕಾರ ಕೋವಿಡ್ ೧೯ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ವೈದ್ಯರುಗಳಿಗೆ ವಿಶೇಷ ಭತ್ಯೆ ನೀಡಿದಂತೆ ಅರೆ ವೈದ್ಯಕೀಯ ಮತ್ತು ಇತರೆ ಸಿಬ್ಬಂದಿಗಳಿಗೆ ಅರ್ಹತೆಗೆ ಅನುಗುಣವಾಗಿ ವಿಶೇಷ ಭತ್ಯೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಹಾಗೂ ವೈದ್ಯಕೀಯ ಶಿಕ್ಷಣ ಅಧಿಕಾರಿಗಳು ಮತ್ತು ನೌಕರ ಸಂಘದ ರಾಜ್ಯಾಧ್ಯಕ್ಷ ಎ.ಪುಟ್ಟಸ್ವಾಮಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲಾಖೆಯಲ್ಲಿ ರಾಜ್ಯದಲ್ಲಿ ಒಟ್ಟು ೬೯,೬೬೭ ಖಾಯಂ ಹುದ್ದೆಗಳಿದ್ದು, ೩೯,೧೩೯ ನೌಕರರು ಮಾತ್ರ ಕರ್ತವ್ಯದಲ್ಲಿದ್ದಾರೆ. ೧೦೧೦ ಹಂಗಾಮಿ ನೌಕರರಿದ್ದಾರೆ. ಒಟ್ಟು ೩೦,೫೨೮ ಹುದ್ದೆಗಳು ಖಾಲಿ ಇವೆ. ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಶ್ರಮಿಸುತ್ತಿರುವ ಇಲಾಖೆಯಲ್ಲಿ ಹುದ್ದೆ ಖಾಲಿ ಇದ್ದರೂ ಇರುವ ಸಿಬ್ಬಂದಿಗಳೇ ಕೊರೊನಾ ಸಂದರ್ಭದಲ್ಲಿ ಹಗಲಿರುಳು ಕರ್ತವ್ಯ ನಿರ್ವಹಿಸಿದ್ದಾರೆ. ಬಹುತೇಕ ಶೇ. ೫೦ ರಷ್ಟು ಖಾಲಿ ಇರುವ ಹುದ್ದೆಯನ್ನು ಸರ್ಕಾರ ಕೂಡಲೇ ಭರ್ತಿ ಮಾಡಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ವಿಲೀನಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಒಳಗುತ್ತಿಗೆ, ಹೊರಗುತ್ತಿಗೆ ನೌಕರರು ಮತ್ತು ಅವಲಂಬಿತರಿಗೆ ಪೂರ್ಣ ಪ್ರಮಾಣದ ಚಿಕಿತ್ಸೆಗೆ ಸಂಬAಧಪಟ್ಟ ಪರೀಕ್ಷೆಗಳನ್ನು ಉಚಿತವಾಗಿ ನೀಡಬೇಕು. ಆರೋಗ್ಯ ಇಲಾಖೆ ನೌಕರರ ದಿನಾಚರಣೆಯನ್ನು ಘೋಷಣೆ ಮಾಡಬೇಕು. ಸಿಬ್ಬಂದಿಗೆ ಉತ್ತೇಜನಕಾರಿ ಸೌಲಭ್ಯ ನೀಡುವ ಸಂದರ್ಭ ಯಾವುದೇ ತಾರತಮ್ಯ ಉಂಟಾಗದAತೆ ನೋಡಿಕೊಳ್ಳಬೇಕು. ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಅತ್ಯಂತ ಅವೈಜ್ಞಾನಿಕ ಮತ್ತು ಅಪ್ರಸ್ತುತವಾಗಿದ್ದು, ಇದರಿಂದ ಹಲವಾರು ತೊಂದರೆಗಳು ಎದುರಾಗುತ್ತಿವೆ. ಆದ್ದರಿಂದ ಬಯೋಮೆಟ್ರಿಕ್ ವ್ಯವಸ್ಥೆ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಎಕ್ಸ್ರೇ ಅಸೋಸಿಯೇಷನ್ ಅಧ್ಯಕ್ಷ ಉಪಾಧ್ಯಕ್ಷ ಎಂ.ಆರ್. ರಾಮಚಂದ್ರ ರೆಡ್ಡಿ, ಲಿಪಿಕಾ ನೌಕರರ ಸಂಘದ ಪ್ರಮುಖರಾದ ವಿ.ಕೆ. ನಾಗರಾಜು, ರಾಮನಗರ ಜಿಲ್ಲಾಧ್ಯಕ್ಷ ಎ. ಅಂಬರೀಶ್ ಗೌಡ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಖಜಾಂಚಿ ಪಿ.ಡಿ. ರಾಜೇಶ್, ಕೊಡಗು ಜಿಲ್ಲಾಧ್ಯಕ್ಷ ಕೆ.ಬಿ. ರವಿ ಉಪಸ್ಥಿತರಿದ್ದರು.