ಸೋಮವಾರಪೇಟೆ, ಮಾ. ೧೯: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಲಾಗಿರುವ ಅಂಗಡಿ ಮಳಿಗೆಗಳನ್ನು ಬಾಡಿಗೆಗೆ ಕೊಡಲಾಗಿದ್ದು, ಇದರ ಠೇವಣಿ ಹಣವನ್ನು ಬ್ಯಾಂಕ್‌ನಲ್ಲಿ ಇಟ್ಟಿರುವ ದರಿಂದ ಬ್ಯಾಂಕಿಗಷ್ಟೇ ಲಾಭವಾಗುತ್ತಿದೆ. ಪಂಚಾಯಿತಿಗೆ ಯಾವುದೇ ಉಪಯೋಗವಿಲ್ಲ. ಈ ಹಿನ್ನೆಲೆ ಬ್ಯಾಂಕ್‌ನಲ್ಲಿರುವ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿ ಕೊಳ್ಳುವ ಸಂಬAಧ ಸರ್ಕಾರಕ್ಕೆ ಪತ್ರ ಬರೆದು ಅನುಮತಿ ಕೋರುವಂತೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸ ಲಾಯಿತು.
ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ನಳಿನಿ ಗಣೇಶ್ ಅಧ್ಯಕ್ಷತೆಯಲ್ಲಿ, ಪ.ಪಂ. ಸಭಾಂಗಣ ದಲ್ಲಿ ನಡೆಯಿತು. ಮಳಿಗೆಗಳ ಮುಂಗಡ ಹಣ ೧.೫೦ ಕೋಟಿಯನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದು, ಇದರಿಂದ ಪ.ಪಂ.ಗೆ ಯಾವುದೇ ಲಾಭವಿಲ್ಲ. ಬ್ಯಾಂಕ್‌ಗೆ ಮಾತ್ರ ಲಾಭವಾಗಿದೆ ಎಂದು ನಾಮ ನಿರ್ದೇಶನ ಸದಸ್ಯ ಎಸ್.ಮಹೇಶ್ ಹೇಳಿದರು.
ಬ್ಯಾಂಕಿನಲ್ಲಿ ಇಟ್ಟಿರುವ ಹಣವನ್ನು ಬಳಸಿಕೊಂಡು ನಿವೇಶನ ಖರೀದಿಸಿ, ನಿವೇಶನ ರಹಿತರಿಗೆ ವಿತರಿಸಲು ಕ್ರಮಕೈಗೊಳ್ಳಬೇಕು ಎಂಬ ಅಭಿಪ್ರಾಯ ಕೇಳಿಬಂತು. ಠೇವಣಿಯ ಹಣವನ್ನು ಬಳಸಿಕೊಳ್ಳಲು ಅವಕಾಶವಿಲ್ಲ ಎಂದು ಮುಖ್ಯಾಧಿಕಾರಿ ನಾಚಪ್ಪ ಹಾಗೂ ಅಧಿಕಾರಿಗಳು ಹೇಳಿದರು.
ಬ್ಯಾಂಕಿನಲ್ಲಿರುವ ಹಣವನ್ನು ನಿವೇಶನ ಖರೀದಿ ಅಥವಾ ಪ.ಪಂ. ವ್ಯಾಪ್ತಿಯ ಸರ್ವಾಂಗೀಣ ಅಭಿವೃದ್ಧಿ ಗಾಗಿ ಬಳಸಿಕೊಳ್ಳಲು ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.
ಕುಡಿಯುವ ನೀರಿಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸು ತ್ತಿದ್ದರೂ ಸಾರ್ವಜನಿಕರಿಗೆ ಸರಿಯಾಗಿ ಕುಡಿಯುವ ನೀರು ಸಿಗುತ್ತಿಲ್ಲ; ಇದು ನಿಜಕ್ಕೂ ನಾಚಿಕೆಯ ವಿಚಾರ ಎಂದು ಸದಸ್ಯ ಜೀವನ್ ಹೇಳಿದರು. ದುದ್ದುಗಲ್ಲು ಹೊಳೆಯಲ್ಲಿ ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಂಡರೆ ಪಟ್ಟಣದ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂದು ಸದಸ್ಯರಾದ ಬಿ.ಆರ್. ಮಹೇಶ್, ಶುಭಕರ್ ಅಭಿಪ್ರಾಯಿಸಿದರು.
ಕೆಲವು ವಾಟರ್ ಮೆನ್‌ಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ಆರೋಪ ಸಭೆಯಲ್ಲಿ ಕೇಳಿಬಂತು. ಈ ಬಗ್ಗೆ ಗಮನ ಹರಿಸಿ ಲೋಪಗಳನ್ನು ಸರಿಪಡಿಸಿಕೊಳ್ಳುವಂತೆ ವಾಟರ್‌ಮೆನ್‌ಗಳಿಗೆ ನಿರ್ದೇಶಿಸಲು ಆರೋಗ್ಯ ನಿರೀಕ್ಷಕ ಉದಯಕುಮಾರ್ ಅವರಿಗೆ ಸೂಚಿಸಲಾಯಿತು.
ಪಟ್ಟಣಕ್ಕೆ ಹಾರಂಗಿ ಮತ್ತು ದುದ್ದುಗಲ್ಲಿನಿಂದ ನೀರು ಸರಬರಾಜು ಆಗುತ್ತಿದ್ದು, ಮೋಟಾರ್‌ಗಳು ಹಾಳಾಗುತ್ತಿವೆ. ಇವುಗಳನ್ನು ಉನ್ನತೀಕರಣ ಗೊಳಿಸಲು ಕ್ರಮವಹಿಸ ಲಾಗುತ್ತಿದೆ ಎಂದು ಉದಯಕುಮಾರ್ ತಿಳಿಸಿದರು. ಹಾರಂಗಿ ಮತ್ತು ದುದ್ದುಗಲ್ಲು ನೀರಿನ ಘಟಕವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಈ ಬಗ್ಗೆ ವಾಟರ್ ಮೆನ್‌ಗಳಿಗೆ ಎಚ್ಚರಿಕೆ ನೀಡುವಂತೆ ಉಪಾಧ್ಯಕ್ಷ ಸಂಜೀವ ಅವರು ಅಧಿಕಾರಿಗೆ ಸೂಚಿಸಿದರು.
ಜೂನ್‌ವರೆಗೆ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರಲಿದ್ದು, ಇದನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ಅಧ್ಯಕ್ಷೆ ನಳಿನಿ ಹಾಗೂ ಉಪಾಧ್ಯಕ್ಷ ಸಂಜೀವ ಅವರುಗಳು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಆನೆಕೆರೆಯನ್ನು ಅಭಿವೃದ್ಧಿಗೊಳಿಸಲು ಸಣ್ಣನೀರಾವರಿ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮಕ್ಕೆ ಪತ್ರ ಬರೆಯುವಂತೆ ತೀರ್ಮಾನಿಸಲಾಯಿತು. ಇದ ರೊಂದಿಗೆ ಆನೆಕೆರೆ ಒತ್ತುವರಿಯಾಗಿದ್ದು ಇದನ್ನು ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಲು ಕಂದಾಯ ಇಲಾಖೆಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಇಲ್ಲಿನ ನಾಡು ವ್ಯವಸಾಯೋತ್ಪನ್ನ ಮಾರಾಟ ಸಂಘದ ಜಾಗವನ್ನು ಪ.ಪಂ. ಒತ್ತುವರಿ ಮಾಡಿಕೊಂಡಿದ್ದು, ಇದನ್ನು ತೆರವುಗೊಳಿಸುವಂತೆ ಸಂಘದಿAದ ನೀಡಿರುವ ಅರ್ಜಿಯ ಬಗ್ಗೆ ಚರ್ಚೆ ನಡೆದು, ಸರ್ವ ಸದಸ್ಯರನ್ನು ಒಳಗೊಂಡAತೆ ಜಂಟಿ ಸರ್ವೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.
ಪ.ಪಂ. ವ್ಯಾಪ್ತಿಯಲ್ಲಿರುವ ವಿವಿಧ ರಸ್ತೆಗಳ ಗುಂಡಿ ಮುಚ್ಚುವ ವಿಚಾರದಲ್ಲಿ ಚರ್ಚೆ ನಡೆದು, ಒಳ ರಸ್ತೆಗಳ ಗುಂಡಿಗಳನ್ನೂ ಸಹ ಮುಚ್ಚಬೇಕು. ವಾರ್ಡ್ವಾರು ಕಾಮಗಾರಿ ಪೂರ್ಣ ಗೊಳಿಸುವಂತೆ ಸದಸ್ಯ ಜೀವನ್ ಹೇಳಿದರು. ಮಾರುಕಟ್ಟೆ ಸಾರ್ವಜನಿಕ ಶೌಚಾಲಯವನ್ನು ರೂ.೪೬ ಸಾವಿರ ವೆಚ್ಚದಲ್ಲಿ ದುರಸ್ತಿ ಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷೆ ನಳಿನಿ ಗಣೇಶ್ ತಿಳಿಸಿದರು.
ವೈಜ್ಞಾನಿಕ ಕಸವಿಲೇವಾರಿಗೆ ಸಂಬAಧಿಸಿದAತೆ ಖುದ್ದು ಪರಿಶೀಲನೆ ನಡೆಸಿ ಮಾಹಿತಿ ಹೊಂದಿಕೊಳ್ಳಲು ಸರ್ವ ಸದಸ್ಯರ ನಿಯೋಗದಿಂದ ಅಧ್ಯಯನ ಪ್ರವಾಸ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.
ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಲು ನೋಟೀಸ್ ಜಾರಿಗೊಳಿಸಿ ಎಂದು ಸಂಜೀವ ಹೇಳಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ವಿವಿಧ ಕಾಮಗಾರಿ, ಕುಡಿಯುವ ನೀರು, ಕಚೇರಿ ನಿರ್ವಹಣೆ, ನೈರ್ಮಲ್ಯಕ್ಕೆ ಸಂಬAಧಿಸಿದAತೆ ಟೆಂಡರ್ ಕರೆಯುವಂತೆ ನಿರ್ಧರಿಸಲಾಯಿತು.
ಸಭೆಯಲ್ಲಿ ಸದಸ್ಯರಾದ ಬಿ.ಸಿ. ವೆಂಕಟೇಶ್, ಉದಯಶಂಕರ್, ಪಿ.ಕೆ. ಚಂದ್ರು, ನಾಗರತ್ನ, ಶೀಲಾ ಡಿಸೋಜ, ಬಿ.ಆರ್. ಮಹೇಶ್, ಜಯಂತಿ ಶಿವಕುಮಾರ್, ನಾಮನಿರ್ದೇಶನ ಸದಸ್ಯರಾದ ಎಸ್.ಆರ್. ಸೋಮೇಶ್, ಶರತ್ ಚಂದ್ರ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ.ಪಂ. ಸದಸ್ಯೆ ಜಯಂತಿ ಶಿವಕುಮಾರ್ ಅಧ್ಯಕ್ಷತೆಯ ಸ್ಥಾಯಿ ಸಮಿತಿಗೆ ನಾಗರತ್ನ, ಪಿ.ಕೆ. ಚಂದ್ರು, ಶುಭಕರ, ವೆಂಕಟೇಶ್, ಶೀಲಾ ಡಿಸೋಜ ಹಾಗೂ ಜೀವನ್ ಅವರುಗಳನ್ನು ಸದಸ್ಯರನ್ನಾಗಿ ನೇಮಕಗೊಳಿಸಲಾಯಿತು.