ಕುಶಾಲನಗರ, ಮಾ. ೧೯: ಕುಶಾಲನಗರ -ಮಡಿಕೇರಿ ರಸ್ತೆಯಲ್ಲಿರುವ ತಾವರೆಕೆರೆ ಒತ್ತುವರಿ ತೆರವುಗೊಳಿಸಲು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ದೂರಿನ ಸಂಬAಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟೀಸ್ ಜಾರಿಗೊಳಿಸಿದೆ. ಕೆರೆ ಮತ್ತು ಬಫರ್ ವಲಯದ ಸರ್ವೇ ನಡೆಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಹೈಕೋರ್ಟ್ ವಕೀಲ ಎನ್.ಪಿ. ಅಮೃತೇಶ್ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ, ಪ್ರತಿವಾದಿಗಳಾದ, ರಾಜ್ಯ ಮುಖ್ಯ ಕಾರ್ಯದರ್ಶಿ, ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಡಗು ಜಿಲ್ಲಾಧಿಕಾರಿ, ಕುಶಾಲನಗರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮತ್ತು ವಿವೇಕಾನಂದ ಎಜುಕೇಶನ್ ಟ್ರಸ್ಟ್ಗೆ ನೋಟೀಸ್ ಜಾರಿಗೊಳಿಸಿದೆ.
ಅರ್ಜಿಯಲ್ಲಿ ತಿಳಿಸಿರುವಂತೆ ಕೆರೆ ಒತ್ತುವರಿ ಆಗಿದೆಯೇ ಎಂಬುದನ್ನು ಪರಿಶೀಲಿಸಲು ಹಿರಿಯ ಕಂದಾಯ ಅಧಿಕಾರಿ ಒಬ್ಬರನ್ನು ನಿಯೋಜಿಸಲು ಸೂಚಿಸಿದ ಪೀಠ, ಕೆರೆ ಮತ್ತು ಬಫರ್ ಜೋನ್ ಸರ್ವೇ ನಡೆಸಬೇಕು, ಒತ್ತುವರಿ ಕಂಡುಬAದಲ್ಲಿ ಅದನ್ನು ತೆರವು ಗೊಳಿಸಲು ಕೈಗೊಂಡ ಕ್ರಮದ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿದೆ.