ಕುಶಾಲನಗರ, ಮಾ. ೨೦: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿ.ಎಲ್. ವಿಶ್ವ ಅವರ ನೇತೃತ್ವದಲ್ಲಿ ‘ಜನಸ್ಪಂದನ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಗ್ರಾಮದ ಜನರ ಮನೆ ಬಾಗಿಲಿಗೆ ತೆರಳಿ ಪಂಚಾಯಿತಿ ವ್ಯಾಪ್ತಿಗೆ ಬರುವ ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಾಗರಿಕರ ಜತೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಚರ್ಚೆ ನಡೆಸಿ ನಿರ್ಣಯ ಕೈಗೊಂಡರು.

ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅವುಗಳ ಬಗ್ಗೆ ಯೋಜನೆ ರೂಪಿಸುವ ಮೂಲಕ ಅನುಷ್ಠಾನಕ್ಕೆ ತರಲಾಗುವುದು ಎಂದು ಪಂಚಾಯತಿ ಅಧ್ಯಕ್ಷ ಸಿ.ಎಲ್. ವಿಶ್ವ ತಿಳಿಸಿದ್ದಾರೆ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಲ್ಪ, ಉಪಾಧ್ಯಕ್ಷ ಸಮೀರ, ಸದಸ್ಯರಾದ ಜಾಜಿ ತಮ್ಮಯ್ಯ, ಕುಸುಮ ಮತ್ತು ಪಂಚಾಯಿತಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಆಡಳಿತ ಮಂಡಳಿಯ ವಿನೂತನ ಕಾರ್ಯಕ್ರಮಕ್ಕೆ ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದು ಅಭಿವೃದ್ಧಿ ಅಧಿಕಾರಿ ಕಲ್ಪ ಮಾಹಿತಿ ನೀಡಿದ್ದಾರೆ.