*ಗೋಣಿಕೊಪ್ಪಲು, ಮಾ. ೨೦: ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥಮಾಡದೇ ಕಲಿಕೆಯತ್ತ ಹೆಚ್ಚು ಆಸಕ್ತರಾಗುವ ಮೂಲಕ ಉತ್ತಮ ಅಂಕಗಳಿಸಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಾಧನೆ ತೋರಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೆಳಗಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಗೋಣಿಕೊಪ್ಪಲು ಪ್ರೌಢಶಾಲೆ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ರಚಿಸಲಾದ ‘ವಿಜ್ಞಾನ ಪಾಸಿಂಗ್ ಪ್ಯಾಕೇಜ್’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಓದಿನ ಬಗ್ಗೆ ಉತ್ತಮ ಸಿದ್ಧತೆ ನಡೆಸಿ ಉತ್ತಮ ಅಂಕಗಳಿಸಬೇಕು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಜ್ಞಾನ ಪಾಸಿಂಗ್ ಪ್ಯಾಕೇಜ್ ಮಾಹಿತಿ ಕೋಶ ಸರಳವಾಗಿ ಪಠ್ಯಗಳ ಮಾಹಿತಿಯನ್ನು ಒದಗಿಸುತ್ತದೆ. ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕೆಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಹಾಗೂ ವಿಜ್ಞಾನ ಶಿಕ್ಷಕರ ಕೃಷ್ಣಚೈತನ್ಯ ಅವರು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಿಕ್ಷಣ ಸಂಯೋಜಕರ ಆಶಯದಂತೆ ಸುಮಾರು ಹತ್ತು ದಿನಗಳ ಕಾಲ ಪರಶ್ರಮದಿಂದ ದುಡಿದು ಈ ಕಿರು ಹೊತ್ತಿಗೆಯನ್ನು ಸಿದ್ಧಗೊಳಿಸಲಾಗಿದೆ.

ಮುಂದಿನ ದಿನಗಳಲ್ಲಿ ಇರುವ ಸಣ್ಣಪುಟ್ಟ ತಪ್ಪುಗಳನ್ನು ತಿದ್ದಿ ಇನ್ನೂ ಉತ್ತಮ ವಿಜ್ಞಾನ ಪ್ರಶ್ನೋತ್ತರ ಪುಸ್ತಕವನ್ನು ರೂಪಿಸಲಾಗುವುದು, ತಾಲೂಕಿನ ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸೂಚಿಸಿದರು.

ಶಾಲೆಯ ಮುಖ್ಯಶಿಕ್ಷಕ ರತೀಶ್ ರೈ ಸೇರಿದಂತೆ ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.