ವೀರಾಜಪೇಟೆ, ಮಾ. ೧೮: ವೀರಾಜಪೇಟೆ ಪಟ್ಟಣ ಪಂಚಾಯಿತಿಯು ೨೦೨೧-೨೨ನೇ ಸಾಲಿಗೆ ಎಲ್ಲ ಮೂಲದ ಆದಾಯ ಬಾಬ್ತುಗಳಿಂದ ೧೭.೭೧ ಕೋಟಿ ಆದಾಯದ ನಿರೀಕ್ಷಣೆಯಲ್ಲಿದ್ದು ಈ ಪೈಕಿ ೧೭.೫೪ ಕೋಟಿ ನಿರೀಕ್ಷಿತ ವೆಚ್ಚವನ್ನು ಹೊಂದಿದ್ದು ಇದರಿಂದ ರೂ ೧೭,೫೫,೫೬೭ ಉಳಿತಾಯ ಬಜೆಟ್ನ್ನು ಅಂಗೀಕರಿಸಿದೆ.
ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಟಿ.ಆರ್. ಸುಶ್ಮಿತಾ ಅವರ ಅಧ್ಯಕ್ಷತೆಯಲ್ಲಿ ನಡೆದ ೨೦೨೧-೨೨ನೇ ಸಾಲಿನ ಉಳಿತಾಯ ಬಜೆಟ್ನ್ನು ಪಟ್ಟಣ ಪಂಚಾಯಿತಿ ಸದಸ್ಯರುಗಳ ಸಮ್ಮುಖದಲ್ಲಿ ಮಂಡಿಸಿದರು.
ಬಜೆಟ್ಗೆ ಮೊದಲು ಸಭೆಯನ್ನುದ್ದೇಶಿಸಿ ಮಾತನಾಡಿದ ಸುಶ್ಮಿತಾ ಅವರು ವೀರಾಜಪೇಟೆ ಪಟ್ಟಣವು ದಿನೇ ದಿನೇ ಬೆಳೆಯುತ್ತಿರುವ ಪಟ್ಟಣವಾಗಿದ್ದು, ಸುಮಾರು ೯.೫ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಪಟ್ಟಣಕ್ಕೆ ಇಂದು ಮೂಲಭೂತ ಸೌಕರ್ಯ ಒದಗಿಸುವುದು ಪಟ್ಟಣ ಪಂಚಾಯಿತಿಯ ಆದ್ಯ ಕರ್ತವ್ಯವಾಗಿದೆ. ಕುಡಿಯುವ ನಲ್ಲಿ ನೀರು, ರಸ್ತೆ, ಚರಂಡಿ, ನೈರ್ಮಲ್ಯ, ಬೀದಿ ದೀಪದ ವ್ಯವಸ್ಥೆ ಎಲ್ಲ ವಾರ್ಡ್ಗಳಿಗೆ ಸಮನಾಗಿ ಜನಪರ ಕಾಮಗಾರಿಗೆ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ, ಪಟ್ಟಣ ಪಂಚಾಯಿತಿಯನ್ನು ಆರ್ಥಿಕವಾಗಿ ಸದೃಢಗೊಳಿಸುವುದು, ಆದಾಯ ಮೂಲಗಳಾದ ವಿವಿಧ ಬಾಬ್ತುಗಳಿಂದ ತೆರಿಗೆ ಸಂಗ್ರಹ, ಬಾಡಿಗೆ, ಪರವಾನಗಿ ಶುಲ್ಕ ಸೇರಿದಂತೆ ವಿವಿಧ ಆದಾಯ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಪಟ್ಟಣ ಪಂಚಾಯಿತಿಯ ಆದಾಯವನ್ನು ಮತ್ತಷ್ಟು ಸದೃಢಗೊಳಿಸಲು ಪ್ರಯತ್ನಿಸಲಾಗುವುದು ಕಿರು ನೀರು ವಿತರಣಾ ವ್ಯವಸ್ಥೆ, ವಾಣಿಜ್ಯ ಮಳಿಗೆಗಳ ನಿರ್ಮಾಣ ಸ್ತಿರಾಸ್ತಿ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದರು.
ಅಧ್ಯಕ್ಷೆ ಟಿ.ಆರ್. ಸುಶ್ಮಿತಾ ಅವರು ಬಜೆಟ್ ಮಂಡಿಸಿದ ಪ್ರಕಾರ ಆರಂಭ ಶುಲ್ಕ ೫,೪೩,೩೨,೫೬೭, ಜಮೆ ೧೨,೨೮.೩೨,೦೦೦, ಒಟ್ಟು ೧೭,೭೧,೬೪,೫೬೭, ಖರ್ಚು ೧೭,೫೪,೦೯,೦೦೦ ಉಳಿತಾಯ ಬಜೆಟ್ ೧೭,೫೫,೫೬೭ ಆಗಿದೆ.
೨೦೨೧-೨೨ನೇ ಸಾಲಿನಲ್ಲಿ ನಿರೀಕ್ಷಿತ ಆದಾಯದ ಮೂಲಗಳು: ಎಸ್.ಎಫ್.ಸಿ. ಅನುದಾನ ರೂ. ೧೦,೧೪,೬೩,೫೬೭ ೧೫ನೇ ಹಣಕಾಸು ಅನುದಾನ ೭೩,೦೦,೦೦೦, ವಿದ್ಯುತ್ ಅನುದಾನ ೧,೧೨,೦೦,೦೦೦ ಮಳೆಹಾನಿ ೨,೨೦,೦೦,೦೦೦ ಸೇರಿದಂತೆ ಹದಿನೇಳು ಕೋಟಿ ಎಪ್ಪತ್ತೊಂದು ಲಕ್ಷದ ಅರವತ್ತನಾಲ್ಕು ಸಾವಿರದ ಐನೂರ ಅರವತ್ತೇಳು ನಿರೀಕ್ಷಿತ ಆದಾಯವನ್ನು ಕಂಡಿದೆ.
ಬಜೆಟ್ ಅಂಗೀಕರಿಸುವ ಮೊದಲು ಸದಸ್ಯರಾದ ಪಟ್ಟಡ ರಂಜಿ ಪೂಣಚ್ಚ, ಮಹಮ್ಮದ್ ರಾಫಿ ಇದು ಜನಪರ ಬಜೆಟ್ ಅಲ್ಲ. ಈ ಬಜೆಟ್ನಿಂದ ಇಲ್ಲಿನ ನಾಗರಿಕರಿಗೆ ಯಾವುದೇ ಉಪಯುಕ್ತತೆ ಇಲ್ಲ, ಪ್ರಯೋಜನವು ಇಲ್ಲ ಎಂದು ದೂರಿದರು.
ಸದಸ್ಯ ಸಿ.ಕೆ. ಪ್ರಥ್ವಿನಾಥ್ ಮಾತನಾಡಿ, ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಹದಿನೇಳು ಕೋಟಿ ನಿರೀಕ್ಷಿತ ಆದಾಯ ಬರುವುದಿಲ್ಲ. ಸುಮ್ಮನೆ ಬಜೆಟ್ನಲ್ಲಿ ಭಾರೀ ಗಾತ್ರದ ಆದಾಯ ತೋರಿಸಿರುವುದು ನಾಮಕಾವಸ್ಥೆ ಬಜೆಟ್ ಎಂದು ದೂರಿ ವಿರೋಧ ವ್ಯಕ್ತಪಡಿಸಿದರು.
ಸದಸ್ಯೆ ಎಂ.ಕೆ. ದೇಚಮ್ಮ ಮಾತನಾಡಿ, ಪಟ್ಟಣದಲ್ಲಿ ಬೀದಿ ನಾಯಿ, ಬೀಡಾಡಿ ದನಗಳ ನಿಯಂತ್ರಣ, ಬಡವರ ಶವ ಸಂಸ್ಕಾರ, ಪಟ್ಟಣದ ವ್ಯಾಪ್ತಿಗೆ ಬರುವ ಸ್ಮಶಾನಗಳ ಉಸ್ತುವಾರಿ ವೆಚ್ಚಕ್ಕೆ ಬಜೆಟ್ನಲ್ಲಿ ಏನೇನು ವೆಚ್ಚ ತೋರಿಸಿಲ್ಲ. ಇದರ ವೆಚ್ಚವನ್ನು ಬಜೆಟ್ನಲ್ಲಿ ಸೇರಿಸಬೇಕೆಂದೂ ಸಲಹೆ ನೀಡಿದರು. ಸದಸ್ಯ ಎಸ್.ಎಚ್.ಮತೀನ್ ಮಾತನಾಡಿ ಬಜೆಟ್ನ ಪೂರ್ವಭಾವಿ ಸಭೆಯಲ್ಲಿ ಸದಸ್ಯರುಗಳ ನೀಡಿದ ಸಲಹೆ ಅಭಿಪ್ರಾಯಗಳಿಗೆ ಒತ್ತು ನೀಡಿಲ್ಲ ಎಂದು ತಿಳಿಸಿದರು.
ನಾಮನಿರ್ದೇಶನ ಸದಸ್ಯ ಇ.ಸಿ.ಜೀವನ್ ಪಟ್ಟಣ ಪಂಚಾಯಿತಿ ೨೧-೨೨ನೇ ಸಾಲಿನ ಬಜೆಟ್ ಜನಪರ ಬಜೆಟ್ ಆಗಿದ್ದು ಎಲ್ಲರ ಪರವಾಗಿದೆ ಇದನ್ನು ಸರ್ವಾನುಮತದಿಂದ ಅಂಗೀಕರಿಸುವAತೆ ಸಭೆಗೆ ಸಲಹೆ ನೀಡಿದರು.
ಬಜೆಟ್ ಅಂಗೀಕಾರದ ಸಭೆಯಲ್ಲಿ ಮಹಿಳಾ ಸದಸ್ಯರು, ನಾಮ ನಿರ್ದೇಶನ ಸದಸ್ಯರು ಸೇರಿದಂತೆ ಎಲ್ಲ ಸದಸ್ಯರುಗಳು ಹಾಜರಿದ್ದರು. ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಕೆ.ಬಿ. ಹರ್ಷವರ್ಧನ್, ಅಭಿಯಂತರ ಎಂ.ಎನ್. ಹೇಮ್ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀತಾ ಜೂನಾ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.