ಗುಡ್ಡೆಹೊಸೂರು, ಮಾ. ೧೭: ಇಲ್ಲಿನ ಬೊಳ್ಳ್ಳೂರು ಗ್ರಾಮದ ಸುಣ್ಣದಕೆರೆಯ ಶ್ರೀ ನಾಗದೇವರ ಬನ ಮತ್ತು ಶ್ರೀ ಬೇಟೆ ಚಾಮುಂಡೇಶ್ವರಿ ದೇವಸ್ಥಾನ ಸಮಿತಿ ವತಿಯಿಂದ ನಾಗ ಗುಡಿಯಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯವನ್ನು ನಡೆಸಲಾಯಿತು.
ಪೂಜಾ ಕಾರ್ಯವನ್ನು ಉದಯ ಭಟ್ ಮತ್ತು ತಂಡದವರು ನೆರವೇರಿಸಿದರು. ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ನಾರಾಯಣ ಎಂ.ಎ., ಕಾರ್ಯದರ್ಶಿ ರಜಿತ್ ಕುಮಾರ್, ಖಜಾಂಚಿ ಇಂದುಕುಮಾರ್ ಮತ್ತು ಸಮಿತಿಯ ಗೋಪಾಲ್, ಪಾಪು, ವೆಂಕಪ್ಪ ಮುಂತಾದವರು ಹಾಜರಿದ್ದರು. ಪ್ರತಿ ವರ್ಷ ಶಿವರಾತ್ರಿಯ ಮರು ದಿನ ಈ ಪೂಜಾ ಕಾರ್ಯವನ್ನು ನಡೆಸಲಾಗುತ್ತದೆ.
ಜೀಪು ಹಾಗೂ ಬೈಕ್ ನಡುವೆ ಅಪಘಾತ : ಗಾಯ
ಪೊನ್ನಂಪೇಟೆ, ಮಾ.೧೭: ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗ ಮುಖ್ಯ ರಸ್ತೆಯಲ್ಲಿ ರಾತ್ರಿ ೮.೩೦ ರ ಸಮಯದಲ್ಲಿ ಜೀಪು (ಕೆ. ಎ.೧೨. ಎಂ. ೨೬೦೬) ಹಾಗೂ ಬೈಕ್ (ಕೆ. ಎ.೦೫. ಕೆ. ಬಿ.೮೫೮೬) ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ರಕ್ಷಿತ್ ಎಂಬುವರ ಕಾಲು ಮುರಿದು ಹೋಗಿದೆ. ಹಿಂಬದಿಯ ಸವಾರ ಚಂದನ್ ಎಂಬುವವರಿಗೆ ಬೆನ್ನಿನ ಭಾಗಕ್ಕೆ ಪೆಟ್ಟಾಗಿದ್ದು ಘಟನೆ ನಡೆದ ತಕ್ಷಣ ಸ್ಥಳಕ್ಕಾಗಮಿಸಿದ ಪೊನ್ನಂಪೇಟೆ ಪೊಲೀಸ್ ಠಾಣೆ ಎ ಎಸ್ ಐ ಡಿ. ಕುಮಾರ್ ಗಾಯಾಳುಗಳನ್ನು ಗೋಣಿಕೊಪ್ಪ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಅಪಘಾತಕ್ಕೊಳಗಾದ ಬೈಕ್ ಸವಾರರಿಬ್ಬರೂ ಹುಣಸೂರಿನವರಾಗಿದ್ದು ಹಳ್ಳಿಗಟ್ಟುವಿನ ಸಿಐಟಿ ಕಾಲೇಜಿನ ಹಾಸ್ಟೆಲ್ನಲ್ಲಿದ್ದುಕೊಂಡು ಇಂಜಿನಿಯರಿಗ್ ವ್ಯಾಸಂಗ ಮಾಡುತ್ತಿದ್ದರು. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.