ಮಡಿಕೇರಿ, ಮಾ. ೧೭: ಕೊಡಗು ಜಿಲ್ಲೆ ಯಲ್ಲಿ ಮಾನವ-ಪ್ರಾಣಿ ಸಂಘರ್ಷ ವನ್ನು ತಡೆಯಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲು ‘ಕೊಡಗು ಮಾನವ-ವನ್ಯಪ್ರಾಣಿ ಸಂಘರ್ಷ ಉಪಶಮನ ಪ್ರತಿಷ್ಠಾನವನ್ನು ಕೊಡಗು ವೃತ್ತ ಮಟ್ಟದಲ್ಲಿ ಸ್ಥಾಪಿಸಲಾಗಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಆನೆಗಳು ಮತ್ತು ಹುಲಿಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿರುವುದು ಸರಕಾರದ ಗಮನಕ್ಕೆ ಬಂದಿದ್ದು, ವನ್ಯಪ್ರಾಣಿಗಳು ಕಾಡಿನಿಂದ ಹೊರಗೆ ಬಾರದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಇಲಾಖೆ ವತಿಯಿಂದ ಹಲವಾರು ಕ್ರಮಗಳನ್ನು ಕೈಗೊಳ್ಳ ಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಹುಲ್ಲುಗಾವಲು ಸಂರಕ್ಷಣೆ ಹಾಗೂ ಅಭಿವೃದ್ಧಿಗೊಳಿಸಲು ೨೦೧೯-೨೦ನೇ ಸಾಲಿನಿಂದ ೫ ಕೋಟಿ ರೂ.ವೆಚ್ಚದಲ್ಲಿ ಲಂಟಾನ ಮತ್ತು ಯುಪಟೋರಿಯಂ ಕಳೆಗಳ ನಿರ್ಮೂಲನೆ ಎಂಬ ಹೊಸ ಯೋಜನೆ ಅನುಷ್ಠಾನಗೊಳಿಸಿ, ಅದರಡಿಯಲ್ಲಿ ಹಂತಹAತವಾಗಿ ಈ ಕಳೆಗಳನ್ನು ಕಿತ್ತು ಸ್ವಚ್ಛಗೊಳಿಸಿ ಅರಣ್ಯಕ್ಕೆ ಪೂರಕವಾದ ಹುಲ್ಲು ಬೆಳೆಯಲು ಅವಕಾಶ ಮಾಡಲಾಗಿದೆ. ವನ್ಯ ಪ್ರಾಣಿಗಳಿಗೆ ಅರಣ್ಯದೊಳಗೆ ನೀರಿನ ಲಭ್ಯತೆ ಹೆಚ್ಚಿಸಲು ೪೭ ಹೊಸ ಕೆರಗಳನ್ನು ನಿರ್ಮಿಸಲಾಗಿದ್ದು, ಹಾಲಿ ಇರುವ ೬೬ ಕೆರೆಗಳ ಹೂಳೆತ್ತುವ ಕಾಮಗಾರಿ ನಿರ್ವಹಿಸಲಾಗಿದೆ ಎಂದು ವಿವರಿಸಿದ್ದಾರೆ.

ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಬಾರದಂತೆ ತಡೆಯಲು ಅರಣ್ಯದಂಚಿನಲ್ಲಿ ೩೪.೩೫ ಕಿ.ಮೀ ಸೋಲಾರ್ ತಂತಿಬೇಲಿ ನಿರ್ಮಿಸಲಾಗಿದ್ದು, ೧೬೧.೬೦ ಕಿ.ಮೀ. ತಂತಿ ಬೇಲಿಯನ್ನು ನಿರ್ವಹಣೆ ಮಾಡಲಾಗಿದೆ.೯೧.೫೫ ಕಿ.ಮೀ ಆನೆ ತಡೆ ಕಂದಕ ನಿರ್ಮಿಸಲಾಗಿದ್ದು, ೧೪೦.೬೯ ಕಿ.ಮೀ ಕಂದಕವನ್ನು ನಿರ್ವಹಣೆ ಮಾಡಲಾಗಿದೆ. ೩೩.೩೭ ಕಿ.ಮೀ. ತೂಗು ಸೋಲಾರ್ ತಂತಿ ಬೇಲಿ ನಿರ್ಮಿಸಲಾಗಿದ್ದು, ೪೯೬.೧೭ ಟನ್ ಉಪಯೋಗಿತ ರೈಲು ಹಳಿಗಳನ್ನು ಖರೀದಿಸಿ ೨೪.೬೨ಟನ್ ರೈಲು ಹಳಿಗಳನ್ನು ಉಪಯೋಗಿಸಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಕೊಡಗು ಅರಣ್ಯ ವೃತ್ತದ ವ್ಯಾಪ್ತಿಯ ವಲಯಗಳಲ್ಲಿ ಕಾಡಾನೆ ಹಾವಳಿಯ ತುರ್ತು ನಿರ್ವಹಣೆಗೆ ೫೨ ಕ್ಷಿಪ್ರ ಸ್ಪಂದನ ತಂಡಗಳನ್ನು ರಚಿಸಿ ಕಾರ್ಯನಿರ್ವಹಿಸಲಾಗುತ್ತಿದ್ದು, ಆಯ್ದೆ ವಲಯಗಳಲ್ಲಿ ಕಾಡಾನೆಗಳನ್ನು ಮರಳಿ ಕಾಡಿಗೆ ಓಡಿಸುವ ೭೧ ತಂಡವನ್ನು ರಚಿಸಲಾಗಿದೆ. ಕಾಡಾನೆ ಇರುವಿಕೆ, ಅವುಗಳ ಚಲನವಲನಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಎಸ್‌ಎಂಎಸ್ ಅಲರ್ಟ್ ಸಿಸ್ಟಂ ಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಪುಂಡಾನೆಗಳನ್ನು ಗುರುತಿಸಿ ಸೆರೆಹಿಡಿದು ಆಗಿಂದಾಗ್ಗೆ ಆನೆ ಶಿಬಿರಗಳಿಗೆ ಸ್ಥಳಾಂತರಿಸ ಲಾಗಿದ್ದು, ನಾಗರಹೊಳೆ ವ್ಯಾಪ್ತಿಯಲ್ಲಿ ರಕ್ಷಣಾ ಕೆಲಸಗಳಿಗಾಗಿ ಎಸ್‌ಟಿಪಿಎಫ್ ತಂಡ ನೇಮಕ ಮಾಡಲಾಗಿದೆ. ವನ್ಯ ಪ್ರಾಣಿಗಳ ರಕ್ಷಣಾ ದೃಷ್ಟಿಯಿಂದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇದಲ್ಲಿ ೩೭ ವನ್ಯಪ್ರಾಣಿ ಹತ್ಯೆ ತಡೆ ಶಿಬಿರಗಳನ್ನು ಸ್ಥಾಪನೆ ಮಾಡಿ ಪ್ರತಿನಿತ್ಯ ಗಸ್ತು ಮಾಡುವ ಮೂಲಕ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ಕ್ರಮಕೈಗೊಳ್ಳಲಾಗುತ್ತಿದೆ. ಸಂಬAಧಿಸಿದ ಸಿಬ್ಬಂದಿಗಳಿಗೆ ಹಾಗೂ ಇಲಾಖಾ ಸಿಬ್ಬಂದಿಗಳಿಗೆ ವಾಕಿಟಾಕಿ, ಶಸ್ತಾçಸ್ತç, ಆಹಾರ ಸಾಮಗ್ರಿ ಒದಗಿಸಿ ಪರಿಣಾಮಕಾರಿಯಾಗಿ ರಕ್ಷಣಾ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.