ಪಾಲಿಬೆಟ್ಟ, ಮಾ. ೧೭: ವೀರಾಜಪೇಟೆ ತಾಲೂಕಿನ ಚೆನ್ನಂಗಿ ಬಸವನಹಳ್ಳಿ ಹಾಡಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವೈಫಲ್ಯ ಸಾಧಿಸಿದೆ ಎಂದು ಆರೋಪಿಸಿ ನಿವಾಸಿಗಳು ನಡೆಸುತ್ತಿರುವ ಅಹೋರಾತ್ರಿ ಹೋರಾಟ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಕಾಡಾನೆಗಳು ನಾಡಿಗೆ ಬರದಂತೆ ಕಾವಲು ಕಾಯುವ ಮೂಲಕ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗಾಯತ್ರಿ, ಸದಸ್ಯ ಮೇಕೇರಿರ ಅರುಣ, ಜೆ.ಕೆ. ಅಪ್ಪಾಜಿ, ಹಾಡಿ ನಿವಾಸಿಗಳಾದ ಮಂಜುಳಾ, ಗಣೇಶ, ರಾಜು, ಮಹೇಶ ಸೇರಿದಂತೆ ಮತ್ತಿತರರು ಇದ್ದರು.
ಸರಿತಾ ಭೇಟಿ : ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಸರಿತಾ ಪೂಣಚ್ಚ ಭೇಟಿ ನೀಡಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ಮೂಲಕ ನಿರ್ಮಾಣ ಮಾಡಿರುವ ೧೦ ಮನೆಗಳು ಕಳಪೆಯಿಂದ ಕೂಡಿದ್ದು ಕುಸಿದು ಬೀಳುವ ಹಂತದಲ್ಲಿರುವ ಮನೆಗಳಿಗೆ ಕಾಡಾನೆಗಳು ದಾಳಿ ಮಾಡಿ ಸಂಪೂರ್ಣ ಹಾನಿಪಡಿಸಿವೆ. ಸಮಸ್ಯೆ ಪರಿಹರಿಸದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು
ಜಿಲ್ಲಾ ಪಂಚಾಯಿತಿ ಸದಸ್ಯೆ ಪಂಕಜ ಮಾತನಾಡಿ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಸಂಬAಧಪಟ್ಟ ಇಲಾಖಾಧಿಕಾರಿಗಳು ಭೇಟಿ ನೀಡಬೇಕು. ಹಾಡಿ ಸುತ್ತಲೂ ಸೋಲಾರ್ ಬೇಲಿ ಅಳವಡಿಸಬೇಕು. ಕಳಪೆ ಗುಣಮಟ್ಟದ ಮನೆ ನಿರ್ಮಿಸಿರುವ ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. - ಪುತ್ತಂ ಪ್ರದೀಪ್