ನಾಪೋಕ್ಲು, ಮಾ. ೧೭: ಬೆಲೆ ಕುಸಿತ, ಅಕಾಲಿಕ ಮಳೆ, ಕಾರ್ಮಿಕರ ಸಮಸ್ಯೆಯಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಬೆಳೆಗಾರರ ದೀರ್ಘಾವಧಿ ಅಭಿವೃದ್ಧಿ ಸಾಲದ ಕಂತನ್ನು ಎರಡು ವರ್ಷಗಳವರೆಗೆ ಮುಂದೂಡಬೇಕೆAದು ಸಹಕಾರ ಮಂತ್ರಿಗಳಿಗೆ ಬೆಳೆಗಾರರ ಒಕ್ಕೂಟದಿಂದ ಮನವಿ ಮಾಡಲಾಗಿದೆ. ಅದಕ್ಕೆ ಅವರು ಸ್ಪಂದಿಸುವ ಭರವಸೆ ನೀಡಿದ್ದಾರೆ. ಆದರೆ, ತಾ. ೨೫ರ ಒಳಗೆ ತಾವು ಪಡೆದ ಸಾಲವನ್ನು ಮರು ಪಾವತಿ ಮಾಡಬೇಕೆಂದು ಬ್ಯಾಂಕ್‌ನವರು ತಿಳಿಸಿದ್ದಾರೆ. ಆದ್ದರಿಂದ ಜನಪ್ರತಿನಿಧಿಗಳು ಕೂಡಲೇ ಬೆಳೆಗಾರರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಾಲದ ಕಂತನ್ನು ಮುಂದೂಡಲು ಕ್ರಮಕೈಗೊಳ್ಳಬೇಕೆಂದು ನಾಪೋಕ್ಲು ಬೆಳೆಗಾರರ ಒಕ್ಕೂಟದ ಸದಸ್ಯರು ಆಗ್ರಹಿಸಿದ್ದಾರೆ.

ಈ ಬಗ್ಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಕೀಪಾಡಂಡ ಮಧು ಬೋಪಣ್ಣ, ಕುಂಡ್ಯೋಳAಡ ರಮೇಶ್ ಮುದ್ದಯ್ಯ, ಬಿದ್ದಾಟಂಡ ಜಿನ್ನು ನಾಣಯ್ಯ, ಎನ್.ಎಸ್. ಉದಯಶಂಕರ್, ಪಾಡಿಯಮ್ಮಂಡ ಮನು ಮಹೇಶ್, ಬೆಳೆಗಾರರು ಕೈಯಲ್ಲಿ ಕಾಸಿಲ್ಲದೆ ಅತಂತ್ರವಾಗಿದ್ದಾರೆ. ೧೯೯೪ರಲ್ಲಿದ್ದ ಕಾಫಿ ದರ ಈಗಲೂ ಇದೆ. ಅದು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇದೆ. ಸಾಲದ ಕಂತು ಕಟ್ಟಲು ಬೆಳೆಗಾರರಿಗೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ದೀರ್ಘಾವಧಿ ಸಾಲದ ಕಂತು ಕಟ್ಟಿದರೆ ಮತ್ತೇ ವಾಪಸ್ಸು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಬೆಳೆಗಾರರ ಸಾಲದ ಬಡ್ಡಿಯನ್ನು ಮಾತ್ರ ಪಡೆದು ಸಾಲದ ಕಂತು ಕಟ್ಟಲು ಸಮಯ ನೀಡಬೇಕು ಎಂದರು.

ಜನಪ್ರತಿನಿಧಿಗಳು ಸಣ್ಣ ಮತ್ತು ಅತೀ ಸಣ್ಣ ಬೆಳೆಗಾರರ ನೆರವಿಗೆ ಬರಬೇಕಾದ ಅಗತ್ಯವಿದೆ. ಎರಡು ವರ್ಷ ಅಲ್ಲದಿದ್ದರೂ ಒಂದು ವರ್ಷದ ಅವಧಿಗಾದರೂ, ಸಾಲದ ಕಂತನ್ನು ವಿಸ್ತರಿಸಬೇಕು. ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಡೀಸೆಲ್ ಬೆಲೆ ಹೆಚ್ಚಳವಾದ ಕಾರಣ ತೋಟಕ್ಕೆ ನೀರು ಹಾಯಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ. ಮುಖ್ಯಮಂತ್ರಿಗಳು, ಜನಪ್ರತಿನಿಧಿಗಳು ಆದಷ್ಟು ಬೇಗ ರೈತರ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಹುಲಿ ದಾಳಿಯ ಬಗ್ಗೆ ಮಾತನಾಡಿದ ಸರಕಾರ, ಅಧಿಕಾರಿಗಳು ಹುಲಿಯನ್ನು ಕೊಲ್ಲುವ ಅಥವಾ ಹಿಡಿದು ಬೇರೆಡೆಗೆ ಸಾಗಿಸುವ ಕೆಲಸ ಮಾಡಬೇಕು. ಅಲ್ಲಿನ ಜನರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.