ಮಡಿಕೇರಿ, ಮಾ. ೧೬: ಮಕ್ಕಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡುವಂತೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಮಗ್ರ ಮಕ್ಕಳ ರಕ್ಷಣಾ ಯೋಜನೆ, ಜಿಲ್ಲಾ ಮಟ್ಟದ ಮಕ್ಕಳ ರಕ್ಷಣಾ ಸಮಿತಿ ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಾಲ್ಯ ವಿವಾಹ ತಡೆಯಬೇಕು. ಕಡ್ಡಾಯವಾಗಿ ಶಿಕ್ಷಣ ಪಡೆಯುವಂತಾಗಲು ಅಗತ್ಯ ಸಹಕಾರ ನೀಡಬೇಕು, ವಿಶೇಷ ಪಾಲನಾ ಯೋಜನೆಯಡಿ ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಮಕ್ಕಳ ರಕ್ಷಣಾ ಘಟಕದಿಂದ ತರಬೇತಿ ಮತ್ತು ಅರಿವು ಕಾರ್ಯಕ್ರಮ ಏರ್ಪಡಿಸುವಂತೆ ಸಲಹೆ ಮಾಡಿದರು.

ಮಕ್ಕಳನ್ನು ಕುಟುಂಬದ ವಾತಾವರಣದಲ್ಲಿ ಬೆಳೆಸುವುದು, ಮಕ್ಕಳು ದುಡಿಮೆಗೆ ಹೋಗುವುದನ್ನು ತಪ್ಪಿಸುವುದು, ಶಿಕ್ಷಣ ಮುಂದುವರಿಸಲು ಉತ್ತೇಜಿಸುವುದು, ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ, ಪೌಷ್ಠಿಕ ಆಹಾರ ಪೂರೈಕೆ, ವೃತ್ತಿ ತರಬೇತಿ ಇತರ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶದಿಂದ ಮಕ್ಕಳ ಸಮಗ್ರ ರಕ್ಷಣಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಿದರು.

ನಗರದ ಬಾಲಕರ ಬಾಲ ಮಂದಿರ ಮತ್ತು ಬಾಲಕಿಯರ ಬಾಲಮಂದಿರದಲ್ಲಿರುವ ವಿದ್ಯಾರ್ಥಿಗಳು ಸಂಜೆ ವೇಳೆಯಲ್ಲಿ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಲು ಜಿಲ್ಲಾ ಕ್ರೀಡಾ ಇಲಾಖೆ ವ್ಯಾಪ್ತಿಯಲ್ಲಿ ಬರುವ ಟೇಬಲ್ ಟೆನ್ನಿಸ್, ಈಜು, ಓಟ, ಜಿಮ್ ಹೀಗೆ ಹಲವು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತಾಗಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.

ಬಡತನ ಕಾರಣದಿಂದ ಮಕ್ಕಳಿಗೆ ಗುಣಮಟ್ಟದ ಜೀವನ ನಡೆಸಲಾಗದ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಮಕ್ಕಳು ಪೋಷಕರಿಂದ ಬೇರ್ಪಡುವುದನ್ನು ತಪ್ಪಿಸಬೇಕು. ಕುಟುಂಬದ ವಾತಾವರಣದಲ್ಲಿ ಬೆಳೆಸಲು ಪ್ರೋತ್ಸಾಹಿಸುವಂತಾಗಬೇಕು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವತಿಯಿಂದ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣೆ, ಪೋಷಣೆ, ಹಾಗೂ ಮಕ್ಕಳಿಗಿರುವ ವಿವಿಧ ಕಾನೂನು ಮತ್ತು ನಿಯಮ ಕುರಿತು ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಅರಿವು ಮೂಡಿಸಬೇಕು. ಸಾಮರ್ಥ್ಯ ಅಭಿವೃದ್ಧಿ ಮತ್ತು ಅರಿವು ಕಾರ್ಯಕ್ರಮದಡಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚನೆ ನೀಡಿದರು.

ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅರುಂಧತಿ ಮಾಹಿತಿ ನೀಡಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು, ಕಿರಿಯ ಮತ್ತು ಹಿರಿಯ ಆರೋಗ್ಯ ಸಹಾಯಕರಿಗೆ ದತ್ತು ಮಾಸಾಚರಣೆ ಪ್ರಯುಕ್ತ ವಿವಿಧ ಸ್ಥಳಗಳಲ್ಲಿ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದೆ; ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಮಕ್ಕಳ ಪಾಲನಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳ ರಕ್ಷಣೆಗೆ ಒತ್ತು ನೀಡಿವೆ. ಲಾಕ್‌ಡೌನ್ ಸಂದರ್ಭದಲ್ಲಿ ರಜೆಯ ಮೇಲೆ ಮನೆಗೆ ತೆರಳಿದ ಮಕ್ಕಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ಚೈಲ್ಡ್ ಲೈನ್ ಸಂಸ್ಥೆಯ ಜಿಲ್ಲಾ ಸಂಯೋಜಕ ನವೀನ್ ಕುಮಾರ್ ಮಾಹಿತಿ ನೀಡಿ ಮಕ್ಕಳ ಸಹಾಯವಾಣಿ ಸಲಹಾ ಸಮಿತಿಯು ಬಾಲ್ಯ ವಿವಾಹ ತಡೆಯುವುದು, ಬಾಲ ಕಾರ್ಮಿಕ ಪದ್ಧತಿ ಕಂಡುಬAದಲ್ಲಿ ಸೂಕ್ತ ಕ್ರಮವಹಿಸುವುದು. ಮಕ್ಕಳ ರಕ್ಷಣೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.

ಕೊಡಗು ಮಕ್ಕಳ ಸಹಾಯವಾಣಿ ೧೦೯೮ ಗೆ ಜುಲೈ, ೨೦೨೦ ರಿಂದ ಡಿಸೆಂಬರ್, ೨೦೨೦ ರವರೆಗೆ ಶಾಲೆಗೆ ೫ ಮಕ್ಕಳು ಗೈರು ಹಾಜರಾಗಿದ್ದಾರೆ. ಮೂವರು ಮಾನಸಿಕ ಕಿರುಕುಳ, ೭ ಲೈಂಗಿಕ ದೌರ್ಜನ್ಯ, ೯ ಬಾಲ ಕಾರ್ಮಿಕ, ೪ ಕಾಣೆಯಾದ ಮಕ್ಕಳು, ೯ ದೈಹಿಕ ದಂಡನೆಗೆ ತುತ್ತಾದವರು, ೫ ಬಾಲ್ಯ ವಿವಾಹ, ಇಬ್ಬರು ಆಶ್ರಯಕ್ಕೆ ಸಹಾಯ ಕೋರಿದ, ಇಬ್ಬರು ಬಿಕ್ಷಾಟನೆಗೆ, ೬ ಮಂದಿ ವೈದ್ಯಕೀಯ ನೆರವು ಕೋರಿದ, ೫ ಮಂದಿ ಆಪ್ತ ಸಮಾಲೋಚನೆಗೆ ಕೋರಿದ ಪ್ರಕರಣಗಳು ಕಂಡು ಬಂದಿವೆ. ೧೬ ಮಕ್ಕಳ ಕುಟುಂಬಕ್ಕೆ ಕೋವಿಡ್ ಸಂದರ್ಭದಲ್ಲಿ ಆಹಾರ ಕಿಟ್ ವಿತರಿಸಲಾಗಿದೆ. ೩೦ ಮಂದಿಗೆ ಇತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಒಟ್ಟು ೧೦೩ ಪ್ರಕರಣಗಳು ದಾಖಲಾಗಿವೆ. ೨೦೧೨ ರ ಸೆಪ್ಟೆಂಬರ್‌ನಿAದ ೨೦೨೦ರ ಡಿಸೆಂಬರ್ ವರೆಗೆ ಮಕ್ಕಳ ಸಹಾಯವಾಣಿಗೆ ಸುಮಾರು ೧,೮೦೬ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.

ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ನಮಿತಾ ರಾವ್, ಅಬ್ದುಲ್ ಲತೀಫ್ ಮಕ್ಕಳ ಹಕ್ಕುಗಳ ರಕ್ಷಣೆ ಸಂಬAಧಿಸಿದAತೆ ಹಲವು ಸಲಹೆ, ಮಾರ್ಗದರ್ಶನ ನೀಡಿದರು. ಬಾಲ ನ್ಯಾಯ ಮಂಡಳಿಯ ಸೂರಜ್, ಪೊಲೀಸ್ ಇಲಾಖೆಯ ಸುಮತಿ ಹಲವು ಮಾಹಿತಿ ನೀಡಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಕಾರ್ಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಆನಂದ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ, ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಬಿ.ಎಸ್. ಜಯಪ್ಪ, ಮಕ್ಕಳ ಪಾಲನಾ ಸಂಸ್ಥೆಯ ಪ್ರತಿನಿಧಿಗಳು ಇತರರು ಇದ್ದರು.