ನಾಪೋಕ್ಲು, ಮಾ. ೧೬: ಮಡಿಕೇರಿ ತಾಲೂಕಿನ ಎರಡನೇ ದೊಡ್ಡ ಪಟ್ಟಣ ನಾಪೋಕ್ಲು. ಇಲ್ಲಿ ಬಸ್ ನಿಲ್ದಾಣವೇ ಇಲ್ಲ ಎಂದರೆ ನಂಬಲು ಸಾಧ್ಯವೇ? ಆದರೆ ಅದೇ ಸತ್ಯ. ಇಲ್ಲಿ ಬಸ್ ನಿಲ್ದಾಣವಿಲ್ಲದೆ ವಿದ್ಯಾರ್ಥಿಗಳು ಹಾಗೂ ನಾಗರಿಕರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಮುಂಭಾಗದ ಮುಖ್ಯ ರಸ್ತೆಯೇ ಬಸ್ ನಿಲ್ದಾಣವಾಗಿದೆ. ಸಂತೆ ದಿನವಾದ ಸೋಮವಾರವಂತೂ ಇಲ್ಲಿನ ಸಮಸ್ಯೆ ಹೇಳತೀರದು. ಎಲ್ಲೆಂದರಲ್ಲಿ ವಾಹನಗಳು ನಿಲ್ಲುತ್ತವೆ. ಬಸ್ಸುಗಳನ್ನು ರಸ್ತೆ ಬದಿಯಲ್ಲಿ ನಿಲುಗಡೆ ಮಾಡುವದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಬಸ್ ಹತ್ತಲು, ಇಳಿಯಲು ಹರಸಾಹಸ ಪಡುತ್ತಾರೆ. ಬಸ್‌ಗಳ ಓಡಾಟ ಹೆಚ್ಚಾಗಿದ್ದು, ಕೆಲವು ಸಮಯಗಳಲ್ಲಿ ಐದಾರು ಬಸ್‌ಗಳು ಏಕ ಕಾಲಕ್ಕೆ ಬರುವದರಿಂದ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥವಾಗುತ್ತದೆ. ಅಲ್ಲದೆ ರಸ್ತೆಗಳು ಕಿರಿದಾಗಿರುವುದರಿಂದ ಪಾದಾಚಾರಿಗಳು ಸಂಚರಿಸಲು ತೊಂದರೆಯಾಗುತ್ತದೆ.

ಹಲವು ವರ್ಷಗಳಿಂದ ಪಟ್ಟಣದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಮಾಡಬೇಕೆಂಬ ಚರ್ಚೆ ನಡೆಯುತ್ತಿದೆ. ಆದರೆ, ಬಸ್ ನಿಲ್ದಾಣದ ನಿರ್ಮಾಣದ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ. ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸುವ ನಿಟ್ಟಿನಲ್ಲಿ ಈ ಹಿಂದೆ ವಾರದ ಸಂತೆ ನಡೆಯುತ್ತಿದ್ದ ಸ್ಥಳವನ್ನು ಮೀಸಲಿಟ್ಟು, ಪ್ರತ್ಯೇಕ ಮಾರುಕಟ್ಟೆ ನಿರ್ಮಿಸಲಾಗಿದೆ. ಶಾಸಕ ಕೆ.ಜಿ. ಬೋಪಯ್ಯ ವಿಧಾನ ಸಭಾಧ್ಯಕ್ಷರಾಗಿರುವ ಸಂದರ್ಭದಲ್ಲಿ ಸಾಂಕೇತಿಕವಾಗಿ ಇದಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಸರಕಾರದ ಹೆಸರಿನಲ್ಲಿರುವ ಒಂದು ಎಕರೆ ಜಾಗ ನಾಪೋಕ್ಲು ಗ್ರಾಮ ಪಂಚಾಯಿತಿ ಹೆಸರಿಗೆ ವರ್ಗಾವಣೆ ಆಗದಿರುವದು ಎಲ್ಲಾ ಸಮಸ್ಯೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಬಸ್ ನಿಲ್ದಾಣ ನಿರ್ಮಿಸುವ ನಿಟ್ಟಿನಲ್ಲಿ ಹಳೆಯ ಮಾರುಕಟ್ಟೆಯನ್ನು ಕೆಡವಿ ಸದರಿ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ನಾಪೋಕ್ಲುವಿನಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ೫೦ ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲು ಮಾತುಕತೆ ನಡೆದಿತ್ತು. ಆದರೆ ಜಾಗ ವರ್ಗಾವಣೆ ಆಗದೆ ಇರುವದು ಎಲ್ಲದಕ್ಕೂ ತಡೆಗೋಡೆಯಂತಾಗಿದೆ.

ನಾಪೋಕ್ಲುವಿನಲ್ಲಿ ಅಧಿಕ ಸಂಖ್ಯೆಯ ಬಸ್‌ಗಳು ಓಡಾಡುತ್ತಿರುವದರಿಂದ ಹಾಗೂ ಸುತ್ತಮುತ್ತಲ ಊರುಗಳಿಂದ ಬರುತ್ತಿರುವ ವಾಹನಗಳು ಅಧಿಕವಾಗುತ್ತಿರುವದರಿಂದ, ರಸ್ತೆಯಲ್ಲಿ ನಿತ್ಯ ವಾಹನಗಳ ದಟ್ಟಣೆ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ನೂತನ ಬಸ್ ನಿಲ್ದಾಣ ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಈ ವ್ಯಾಪ್ತಿಯ ಸಾರ್ವಜನಿಕರು ಒತ್ತಾಯಿಸಿದ್ದಾರೆ. - ಪಿ.ವಿ. ಪ್ರಭಾಕರ್