ಕಣಿವೆ, ಮಾ. ೧೬: ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕು ವ್ಯಾಪ್ತಿಗಳಲ್ಲಿ ಇರುವ ವಿವಿಧ ಕಲ್ಲು ಗಣಿಗಾರಿಕೆ ಸ್ಥಳಗಳಿಗೆ ಅಧಿಕಾರಿಗಳ ತಂಡ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕೊಡಗು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ, ಸೋಮವಾರಪೇಟೆ ತಾಲೂಕು ಡಿವೈಎಸ್‌ಪಿ ಶೈಲೇಂದ್ರ, ತಾಲೂಕು ದಂಡಾಧಿಕಾರಿಗಳಾದ ಗೋವಿಂದರಾಜು ನೇತೃತ್ವದಲ್ಲಿ ಕಲ್ಲು ಗಣಿಗಾರಿಕೆ ಸ್ಥಳಗಳನ್ನು ಪರಿಶೀಲಿಸಲಾಯಿತು.

ತಾ. ೨೩ ರಂದು ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಕಲ್ಲು ಗಣಿಗಾರಿಕೆಯ ಸ್ಥಳಗಳಿಗೆ ಅಧಿಕಾರಿಗಳ ತಂಡ ಖುದ್ದು ತೆರಳಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿತ್ತು.

ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಗಣಿಗಾರಿಕಾ ದುರಂತಗಳು ಜಿಲ್ಲೆಯಲ್ಲಿ ಸಂಭವಿಸದAತೆ ಮುನ್ನೆಚ್ಚರಿಕೆ ಕೈಗೊಳ್ಳಲು ಅಧಿಕಾರಿಗಳ ತಂಡ ಸಂಬAಧಪಟ್ಟ ಕಲ್ಲು ಗಣಿಗಾರಿಕೆ ಮಾಲೀಕರಿಗೆ ಸೂಚಿಸಿತು.

ಗಣಿಗಾರಿಕೆ ಸ್ಥಳಗಳ ಸುತ್ತ ಸುರಕ್ಷತಾ ಬೇಲಿ ನಿರ್ಮಾಣ, ಇಲಾಖೆ ನೀಡಿರುವ ಮಾರ್ಗಸೂಚಿಯಂತೆ ಕೋರೆಗಳ ಆಳ, ಎತ್ತರವನ್ನು ಸರಿಯಾಗಿ ನಿರ್ವಹಿಸುವುದು. ಕೋರೆಗಳಲ್ಲಿ ಸ್ಪೋಟಕಗಳನ್ನು ಬಳಸುವ ಸಂದರ್ಭ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಅಧಿಕಾರಿಗಳ ತಂಡ ಮಾಹಿತಿ ನೀಡಿತು.

ಜಿಲ್ಲೆಯಲ್ಲಿ ಒಟ್ಟು ೨೩ ಕಲ್ಲು ಗಣಿಗಾರಿಕೆಗಳಿದ್ದು, ಸೋಮವಾರಪೇಟೆ ತಾಲೂಕಿನ ಯಲಕ್ಕನೂರಿನಲ್ಲಿ ೧೦, ಹೊಸಳ್ಳಿಯಲ್ಲಿ ೩, ಅರೆಯೂರು ಗ್ರಾಮದಲ್ಲಿ ೧, ನೇರುಗಳಲೆ ಗ್ರಾಮದಲ್ಲಿ ೨, ಕುಶಾಲನಗರ ತಾಲೂಕಿನ ಸಿದ್ದಲಿಂಗಪುರದಲ್ಲಿ ೨, ಸುಂದರನಗರದಲ್ಲಿ ೧ ಗಣಿಗಾರಿಕೆಗಳಿವೆ ಎಂದು ಗಣಿ ಇಲಾಖೆಯ ಡಿಡಿ ಶ್ರೀನಿವಾಸ್ ಮಾಹಿತಿ ನೀಡಿದರು. ಈ ಸಂದರ್ಭ ಕುಶಾಲನಗರ ಕಂದಾಯ ಅಧಿಕಾರಿ ಸಂತೋಷ್, ಗ್ರಾಮ ಲೆಕ್ಕಿಗ ಗೌತಮ್, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಶಿವಶಂಕರ್, ಗಣಿ ಇಲಾಖೆಯ ಭೂ ವಿಜ್ಞಾನಿಗಳಾದ ರಾಹುಲ್, ಎಚ್.ಡಿ. ರೋಜಾ ಇದ್ದರು.