ಚೆಯ್ಯಂಡಾಣೆ, ಮಾ. ೧೬: ನರಿಯಂದಡ ಹಾಗೂ ಚೇಲಾವರ ಗ್ರಾಮದ ಬೊವ್ವೇರಿಯಂಡ, ಬಾಚಮಂಡ ಜೈನೀರ ಕುಟುಂಬಸ್ಥರ ತೋಟಕ್ಕೆ ದಾಳಿ ಮಾಡಿದ ಕಾಡಾನೆ ಕಾಫಿ, ಅಡಿಕೆ, ಬಾಳೆ ಗಿಡಗಳನ್ನು ಹಾನಿ ಮಾಡಿ ನಷ್ಟ ಉಂಟಾಗಿದೆ. ಅರಣ್ಯ ಇಲಾಖೆಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಕಾಡಾನೆ ದಾಳಿ ಮುಂದುವರಿಸುತ್ತಿದ್ದು ಇದಕ್ಕೆ ಸೂಕ್ತ ಕ್ರಮ ಅರಣ್ಯ ಇಲಾಖೆ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸಿ ನಾಪೋಕ್ಲು-ವೀರಾಜಪೇಟೆ ಮುಖ್ಯ ರಸ್ತೆತಡೆ ನಡೆಸಲಾಗುವುದು.
ಶಾಲಾ-ಕಾಲೇಜು ವಿದ್ಯಾರ್ಥಿಗಳು ಶಾಲೆಗೆ ತೆರಳಲು ಭಯದ ವಾತಾವರಣ ಮೂಡಿದ್ದು, ಕಾರ್ಮಿಕರು ತೋಟಕ್ಕೆ ತೆರಳಲು ಹಿಂಜರಿಯುತ್ತಿದ್ದಾರೆ. ವಾಹನ ಸವಾರರು ಕೂಡ ರಾತ್ರಿ ವೇಳೆ ಸಂಚರಿಸುವಾಗ ಭಯದಿಂದ ಸಂಚರಿಸುವAತಾಗಿದೆ. ಕರಡದಲ್ಲಿ ಬೆಳಿಗ್ಗೆ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತಾದಿಗಳ ವಾಹನದ ಮೇಲೆ ಆನೆ ದಾಳಿ ನಡೆಸಿದ್ದು, ವಾಹನದಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರೆ. ಈ ಭಾಗದ ಜನತೆ ಮನೆಯಿಂದ ಹೊರಬರಲು ಪರಿತಪಿಸುವಂತಾಗಿದೆ.
ಗ್ರಾಮಸ್ಥರಾದ ಬೊವ್ವೇರಿಯಂಡ ಲವಕುಮಾರ್ ಹಾಗೂ ಬಾಚಮಂಡ ಲೋಕೇಶ್ ಪತ್ರಿಕೆಯೊಂದಿಗೆ ಮಾಹಿತಿ ನೀಡಿದ್ದು, ವಾರದೊಳಗೆ ಕಾಡಾನೆಯನ್ನು ಕಾಡಿಗೆ ಅಟ್ಟಬೇಕು. ಕಾಡಾನೆ ಹಾವಳಿಯಿಂದ ಅತಂತ್ರರಾದ-ನಷ್ಟ ಅನುಭವಿಸಿದವರಿಗೆ ಸೂಕ್ತ ಪರಿಹಾರ ಒದಗಿಸಬೇಕು; ಕಾಡಾನೆಯ ಉಪಟಳಕ್ಕೆ ಖಾಯಂ ಪರಿಹಾರ ಒದಗಿಸಬೇಕು. ವಾರದೊಳಗೆ ಈ ಮೇಲಿನ ಮನವಿಗಳಿಗೆ ಅರಣ್ಯ ಅಧಿಕಾರಿಗಳು ಸ್ವಂದಿಸದಿದ್ದರೆ ನಾಪೋಕ್ಲು-ವೀರಾಜಪೇಟೆ ಮುಖ್ಯ ರಸ್ತೆ ತಡೆ ನಡೆಸಿ ಹೋರಾಟ ಮಾಡಲಾಗುವುದು. ಇದಕ್ಕೂ ಯಾವುದೇ ರೀತಿಯ ಪರಿಹಾರ ಸಿಗದಿದ್ದರೆ ಅರಣ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ವರದಿ: ಸಿ.ಎ. ಅಶ್ರಫ್