*ಗೋಣಿಕೊಪ್ಪ, ಮಾ. ೧೬: ಮಕ್ಕಳಲ್ಲಿ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ, ಕೌಟುಂಬಿಕ ಭದ್ರತೆಗೆ ವ್ಯಾಪಾರ ಮತ್ತು ಕೃಷಿ ಚಟುವಟಿಕೆಗಳಿಂದ ಸಾಧ್ಯ ಎಂಬುವುದನ್ನು ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯ ಯುಕೋ ಕ್ಲಬ್ ವತಿಯಿಂದ ಮಕ್ಕಳ ಸಂತೆ ನಡೆಸುವ ಮೂಲಕ ಅರಿವು ಕಾರ್ಯಗಾರವನ್ನು ನಡೆಸಲಾಯಿತು.
ವಿದ್ಯಾರ್ಥಿಗಳು ತರಕಾರಿ, ತಿಂಡಿ-ತಿನಿಸು ಸೇರಿದಂತೆ ಹಲವು ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ವ್ಯಾಪಾರದ ಬಗ್ಗೆ ತಿಳಿದುಕೊಳ್ಳಲು ಮುಂದಾದರು.
ವ್ಯಾಪಾರದ ಜೊತೆಗೆ ಓದಿನ ಅಭಿರುಚಿಯನ್ನು ಹೆಚ್ಚಿಸಲು ಶಿಕ್ಷಕರು ವಿದ್ಯಾರ್ಥಿಗ¼ ಎಂಟು ತಂಡಗಳನ್ನು ರಚಿಸಿ ತಂಡಗಳಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಹೆಸರನ್ನು ನೀಡುವ ಮೂಲಕ ಓದಿನ ಅಭಿರುಚಿ ಬೆಳೆಸುವುದರೊಂದಿಗೆ ವ್ಯಾಪಾರ ಗಳಿಂದ ಆರ್ಥಿಕ ಭದ್ರತೆ ಮತ್ತು ಲಾಭಗಳಿಸುವ ಸೂಕ್ಷ್ಮತೆಗಳ ಬಗ್ಗೆ ತಿಳಿಸಲು ವೇದಿಕೆ ಕಲ್ಪಿಸಿದರು. ವಿದ್ಯಾರ್ಥಿಗಳು ಸೊಪ್ಪು, ತರಕಾರಿ, ಹಣ್ಣು, ಆಹಾರ ವಸ್ತುಗಳನ್ನು ಮಾರಾಟ ಮಾಡಿದರು.
ವಿದ್ಯಾರ್ಥಿಗಳು ಮಾರಾಟಕ್ಕಿಟ್ಟ ವಸ್ತುಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೆಳಗಿ ಹಾಗೂ ಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರುಗಳು, ವಿದ್ಯಾರ್ಥಿಗಳು ಖರೀದಿಸುವ ಮೂಲಕ ವ್ಯಾಪಾರ ನಡೆಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ತುಂಬಿದರು. ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಸಾಜು ಜಾರ್ಚ್ ಮಾತನಾಡಿ, ಮಕ್ಕಳ ಬೆಳವಣಿಗೆಗೆ ಮಕ್ಕಳ ಸಂತೆ ಆಯೋಜಿಸಿರುವುದು ಉತ್ತಮ ಕಾರ್ಯಚಟುವಟಿಕೆ ಯಾಗಿದೆ. ವಿದ್ಯಾವಂತರಾಗಿ ಪದವಿ ಹೊಂದುವ ಮೂಲಕ ಕೃಷಿ ಚಟುವಟಿಕೆ ಮತ್ತು ವ್ಯಾಪಾರ ವಹಿವಾಟಿನಲ್ಲಿಯೂ ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು. ಪಾಲಿಬೆಟ್ಟ ಚೆಷೈರ್ ಹೋಂ ಸಂಸ್ಥೆಯ ಸ್ಥಾಪಕಿ ಗೀತಾಚಂಗಪ್ಪ, ಉದ್ಯಮಿ ಸಿ.ಡಿ. ಮಾದಪ್ಪ, ಗೋಣಿಕೊಪ್ಪಲು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜ್ಯೋತಿಶ್ವರಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಶಾಂತಿ, ಮುಖ್ಯ ಶಿಕ್ಷಕ ಬಿ.ಆರ್. ಸತೀಶ್ ಉಪಸ್ಥಿತರಿದ್ದರು.