ಪೊನ್ನಂಪೇಟೆ, ಮಾ. ೧೫: ದಕ್ಷಿಣ ಕೊಡಗಿನಲ್ಲಿ ದಿನೇದಿನೇ ಹೆಚ್ಚುತ್ತಿರುವ ಹುಲಿ ಸೇರಿದಂತೆ ವನ್ಯಪ್ರಾಣಿಗಳ ಹಾವಳಿಯನ್ನು ಅರಣ್ಯ ಇಲಾಖೆ ಕೂಡಲೇ ನಿಯಂತ್ರಿಸಬೇಕು. ಹುಲಿ ದಾಳಿಯಿಂದಾಗಿ ಮಾನವ ಜೀವಹಾನಿ ಹೀಗೆ ಮುಂದುವರಿಯುತ್ತಿದ್ದರೆ ಜನತೆ ತಾಳ್ಮೆ ಕಳೆದುಕೊಂಡು ಅರಣ್ಯ ಇಲಾಖೆ ವಿರುದ್ಧ ರೊಚ್ಚಿಗೇಳುವ ಸಾಧ್ಯತೆ ಇದೆ ಎಂದು ಜಿಲ್ಲಾ ಪಂಚಾಯಿತಿಯ ಹಿರಿಯ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಅವರು ತಿಳಿಸಿದ್ದಾರೆ.
ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ, ನಿಟ್ಟೂರು, ಬಾಳೆಲೆ, ಬೆಳ್ಳೂರು, ಪೊನ್ನಂಪೇಟೆಯ ಸುತ್ತಮುತ್ತಲಿನ ಭಾಗಗಲ್ಲಿ ಹುಲಿಯ ಉಪಟಳ ತೀವ್ರವಾಗುತ್ತಿದೆ. ಮೊದಲೇ ಕಂಗೆಟ್ಟಿರುವ ಈ ಭಾಗದ ಬೆಳೆಗಾರರು ಮತ್ತು ಕಾರ್ಮಿಕ ವರ್ಗ ಭಯದ ವಾತಾವರಣದಲ್ಲಿ ಜೀವನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.
ದಕ್ಷಿಣ ಕೊಡಗಿನಲ್ಲಿ ಮಾತ್ರ ಕಳೆದ ಎರಡೂವರೆ ತಿಂಗಳಲ್ಲಿ ಹುಲಿ ದಾಳಿಗೆ ಸುಮಾರು ೩೦ ರಿಂದ ೪೦ ಜಾನುವಾರುಗಳು ಬಲಿಯಾಗಿವೆ. ಈ ಘಟನೆಗಳು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಕೊಡಗಿನ ಜಿಲ್ಲಾಧಿಕಾರಿಗಳು ಹುಲಿ ಹಾವಳಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಕುರಿತು ಸರಕಾರಕ್ಕೆ ಸೂಕ್ತ ವರದಿಯೊಂದನ್ನು ಕೂಡಲೇ ಸಲ್ಲಿಸಬೇಕು ಎಂದು ವಿಜು ಸುಬ್ರಹ್ಮಣ್ಯ ಅವರು ಆಗ್ರಹಿಸಿದ್ದಾರೆ.