ಮಡಿಕೇರಿ / *ಗೋಣಿಕೊಪ್ಪ, ಮಾ. ೧೫: ಕೇಂದ್ರ ಸರಕಾರದ ಖಾದಿ ಹಾಗೂ ಗ್ರಾಮೋದ್ಯೋಗ ಮಂಡಳಿ (ಕೆವಿಐಸಿ) ವತಿಯಿಂದ ಶಿವಮೊಗ್ಗದ ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಸಹಭಾಗಿತ್ವದಲ್ಲಿ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ ಜೇನು ಪೆಟ್ಟಿಗೆ ವಿತರಣಾ ಕಾರ್ಯಕ್ರಮ ಪೊನ್ನಂಪೇಟೆ ಅರಣ್ಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು. ಕರ್ನಾಟಕದ ಬಹಳಷ್ಟು ಕಡೆ ಆನೆ-ಮಾನವ ಸಂಘರ್ಷ ತೀವ್ರಗೊಳ್ಳುತ್ತಿದ್ದು, ಕೊಡಗಿನಲ್ಲಿಯೂ ನಿರಂತರ ಕಾಡಾನೆ ದಾಳಿಯಿಂದ ಬೆಳೆ ನಾಶ ಹಾಗೂ ಪ್ರಾಣ ಹಾನಿ ಸಂಭವಿಸುತ್ತಿದೆ. ಇದರ ನಿಯಂತ್ರಣಕ್ಕೆ ಹಲವಾರು ಪ್ರಯತ್ನಗಳು ನಡೆದಿವೆ. ಬಹುತೇಕ ವಿಫಲವಾಗಿವೆ. ಇದೀಗ ಜೇನುನೊಣಗಳನ್ನು ಬಳಸಿ ಕಾಡಾನೆಗಳು, ರೈತರ ಜಮೀನು, ತೋಟಗಳಿಗೆ ನುಸುಳಿ ಬೆಳೆ ಹಾನಿ ಹಾಗೂ ಮಾನವ ಜೀವ ಹಾನಿ ಮಾಡುವುದನ್ನು ತಡೆಯುವ ನೂತನ ಪ್ರಯತ್ನ ಭಾರತದಲ್ಲೇ ಮೊದಲನೆಯ ಬಾರಿಗೆ, ಕೊಡಗಿನಲ್ಲಿ ನಡೆಯುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಗುರುತಿಸಲ್ಪಟ್ಟ ಹಲವೆಡೆ ಜೇನುನೊಣಗಳುಳ್ಳ ಪೆಟ್ಟಿಗೆಗಳನ್ನು ಅಳವಡಿಸಲಾಗಿದೆ. ಹಲವಾರು ರೈತರು ತಮ್ಮ ಜಮೀನು, ತೋಟಗಳಲ್ಲೂ ಇದನ್ನು ಅಳವಡಿಸುವ, ನಿರ್ವಹಿಸುವ ಕಾರ್ಯಕ್ಕೆ ತರಬೇತಿ ಪಡೆದಿದ್ದು, ಈ ಫಲಾನುಭವಿಗಳಿಗೆ ಜೇನು ಪೆಟ್ಟಿಗೆ ವಿತರಣಾ ಕಾರ್ಯ ಇಂದು ಅರಣ್ಯ ಮಹಾವಿದ್ಯಾಲಯದಲ್ಲಿ ನಡೆಯಿತು.

ಪೆಟ್ಟಿಗೆಗಳನ್ನು ವಿತರಣೆ ಮಾಡಿ ಮಾತನಾಡಿದ ಕೆವಿಐಸಿ ಯ ಅಧ್ಯಕ್ಷ ವಿನಯ್ ಕುಮಾರ್ ಸಕ್ಸೇನ, ನೂತನ ಯೋಜನೆ ಅರಣ್ಯ ಮಹಾವಿದ್ಯಾಲಯ ಹಾಗೂ ಕೆವಿಐಸಿಗೆ ಹೆಮ್ಮೆಯ ವಿಷಯವಾಗಿದೆ. ೨೦೧೭ ರಂದು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಸಿಹಿ ಕ್ರಾಂತಿ ಯೋಜನೆಯಡಿ ಜೇನು ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಕೆವಿಐಸಿ ವತಿಯಿಂದ ಉಚಿತವಾಗಿ ರೈತರಿಗೆ ಜೇನು ಪೆಟ್ಟಿಗೆಗಳನ್ನು ನೀಡುವ ಕಾರ್ಯ ಪ್ರಾರಂಭವಾಗಿದ್ದು, ಇದುವರೆಗೆ ೧.೫ ಲಕ್ಷ ಪೆಟ್ಟಿಗೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ೨೦,೦೦೦ ಆದಿವಾಸಿಗಳು ಇದರಿಂದ ಪ್ರಯೋಜನ ಪಡೆದುಕೊಂಡಿದ್ದಾರೆ. ಆದರೆ ಇದೀಗ ಕೊಡಗಿನಲ್ಲಿ ಆನೆ ಮಾನವ ಸಂಘರ್ಷ ತಡೆಗೆ ಈ ಜೇನುನೊಣಗಳು ಸಹಕಾರಿಯಾಗಲಿವೆ. ಮಾನವ ಪ್ರಾಣ ಹಾನಿಯನ್ನು ನಿಯಂತ್ರಿಸಬಹುದಾಗಿದೆ. ಇದರೊಂದಿಗೆ ಜೇನು ಉತ್ಪಾದನೆ, ಮೇಣ ಮಾರಾಟ ರೈತರ ಆರ್ಥಿಕ ಜೀವನವನ್ನು ಸಬಲ ಮಾಡುತ್ತವೆ. ರೋಬಸ್ಟಾ ಕಾಫಿ ಪರಾಗ ಸ್ಪರ್ಶ ಕಾರ್ಯಕ್ಕೂ ನೊಣಗಳು ಸಹಕಾರಿಯಾಗಲಿದೆ ಎಂದರು.(ಮೊದಲ ಪುಟದಿಂದ) ಕೆವಿಐಸಿ ಡೆಪ್ಯೂಟಿ ಸಿಇಒ ಸತ್ಯನಾರಾಯಣ ಶುಕ್ಲಾ ಮಾತನಾಡಿ, ಕೆವಿಐಸಿ ಆಶ್ರಯದಲ್ಲಿ ಈ ಯೋಜನೆಗೆ ಬಹಳಷ್ಟು ಆಯಾಮಗಳಿವೆ. ಜೇನು ಸಾಕಣೆ ಕೇವಲ ವ್ಯಾಪಾರದ ಉದ್ದೇಶವಲ್ಲ. ಇದರಿಂದ ಕೃಷಿಯಲ್ಲಿ ಇಳುವರಿ ಹೆಚ್ಚಲಿದೆ. ಜೇನಿನೊಂದಿಗೆ ಮೇಣವನ್ನು ಮಾರಾಟ ಮಾಡುವ ಮೂಲಕ ಉತ್ತಮ ಆದಾಯಗಳಿಸಬಹುದಾಗಿದೆ. ಮಾನವ ಹಾಗೂ ಕಾಡಾನೆ ಇಬ್ಬರ ಸಂರಕ್ಷಣೆ ಸಾಧ್ಯವಿದೆ. ಜೀವವೈವಿದ್ಯ ರಕ್ಷಣೆ ಹಾಗೂ ಪರಿಸರ ಸಮತೋಲನ ಕಾಯ್ದುಕೊಳ್ಳಬಹುದು. ರೈತರು ನವೋದ್ಯಮಿಗಳಾಗಿ ಬೆಳೆಯಲು ಅವಕಾಶವಿದೆ ಎಂದು ಹೇಳಿದರು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ ಮಾತನಾಡಿ, ಪ್ರಾಯೋಗಿಕ ಯೋಜನೆಗೆ ಅರಣ್ಯ ಮಹಾವಿದ್ಯಾಲಯ ಸಾಕ್ಷಿಯಾಗಿರುವುದು ಸಂತೋಷ ತಂದಿದೆ. ಜೇನು ಸಾಕಣೆ ಮತ್ತು ಜೀವ ಹಾನಿ ತಪ್ಪಿಸುವ ಚಿಂತನೆ ಹೆಚ್ಚು ನಿರೀಕ್ಷೆ ಮೂಡಿಸಿದೆ ಎಂದರು.

ಕೆ.ವಿ.ಐ.ಸಿ.ಯ ಸಲಹೆಗಾರ ಡಾ.ಸುದರ್ಶನ್ ಮಾತನಾಡಿ ನೈಸರ್ಗಿಕ ಸಮಸ್ಯೆಗೆ ನೈಸರ್ಗಿಕ ಪರಿಹಾರ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ನೂತನ ಪ್ರಯೋಗ ನಡೆಯಲಿದೆ. ಆನೆ ಕಂದಕ, ಸೋಲಾರ್ ಬೇಲಿಯಂತಹ ಭೌತಿಕ ಪರಿಹಾರದ ಬದಲು ಜೇನುನೊಣ ಪ್ರಯೋಗದ ನೈಸರ್ಗಿಕ ಪರಿಹಾರ ಯಶಸ್ವಿಗೊಳ್ಳಲಿದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಕಾಲೇಜಿನ ಎನ್.ಆರ್.ಎಂ. ವಿಭಾಗದ ಮುಖ್ಯಸ್ಥ ಡಾ. ಜಿ.ಎಂ. ದೇವಗಿರಿ, ಎಸ್.ಎ.ಎಫ್ ವಿಭಾಗದ ಮುಖ್ಯಸ್ಥ ಪ್ರೋ. ರಾಮಕೃಷ್ಣ ಹೆಗ್ಡೆ ಹಾಗೂ ಡಾ. ಕೆಂಚರೆಡ್ಡಿ ಸೇರಿದಂತೆ ರೈತರು ಹಾಗೂ ಪ್ರಾಧ್ಯಾಪಕರುಗಳು ಹಾಜರಿದ್ದರು.