ನಾಪೋಕ್ಲು, ಮಾ. ೧೩: ನಾಪೋಕ್ಲು ಬಸ್ ನಿಲ್ದಾಣ ಸಮೀಪದ ಬೇತು ರಸ್ತೆಯಲ್ಲಿ ಗುಂಡಿ ಮುಚ್ಚದ ಕಾರಣ ವಾಹನ ಚಾಲಕರು ಪರದಾಡುವಂತಾಗಿದೆ. ನಾಪೋಕ್ಲು ಗ್ರಾಮ ಪಂಚಾಯಿತಿ ಮತ್ತು ರಸ್ತೆ ಕಾಮಗಾರಿ ನಡೆಸುವವರ ನಡುವಿನ ತಿಕ್ಕಾಟದಲ್ಲಿ ಈ ಗುಂಡಿಗೆ ಜಲ್ಲಿ ಮಾತ್ರ ತುಂಬಿಸಿ ಹಾಗೆಯೇ ಉಳಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಗ್ರಾಮ ಪಂಚಾಯಿತಿಯ ನಲ್ಲಿ ನೀರಿನ ಪೈಪ್ ಒಡೆದು ಈ ಗುಂಡಿಯಲ್ಲಿ ನೀರು ಸಂಗ್ರಹವಾಗುತ್ತಿದೆ. ನೀರಿನ ಮೇಲೆ ಡಾಂಬರು ಹಾಕಲು ಸಾಧ್ಯವಿಲ್ಲ. ಪೈಪ್ ದುರಸ್ತಿಗೊಳಿಸಿ ಎನ್ನುವದು ರಸ್ತೆ ಕೆಲಸದವರ ವಾದ. ನಮಗೆ ದುರಸ್ತಿಗೊಳಿಸಿ ಸಾಕಾಗಿದೆ. ಇನ್ನು ಸಾಧ್ಯವಿಲ್ಲ ಎನ್ನುವದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾತು. ಒಟ್ಟಿನಲ್ಲಿ ಇಬ್ಬರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ. ವಾಹನ ಚಾಲಕರು ಸಮಸ್ಯೆಗೆ ಸಿಲುಕಿದ್ದಾರೆ. ತಕ್ಷಣ ಇದರ ದುರಸ್ತಿಗೆ ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವದಾಗಿ ನಾಪೋಕ್ಲು ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಎಚ್ಚರಿಸಿದ್ದಾರೆ.