ನಾಪೋಕ್ಲು, ಮಾ. ೧೦: ಎಲ್ಲಾ ಧರ್ಮದವರು ಸಾಮರಸ್ಯದಿಂದ ಬಾಳ್ವೆ ನಡೆಸಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಸೋಮವಾರಪೇಟೆಯ ಮೌಲಾನ ಸಾಫಿ ಸಅದಿ ಹೇಳಿದರು.

ಸಮೀಪದ ಚೆರಿಯಪರಂಬು ಮಖಾಂ ಉರೂಸ್‌ನ ಸಾರ್ವಜನಿಕ ಸಮ್ಮೇಳನದಲ್ಲಿ ಮುಖ್ಯ ಭಾಷಣ ಕಾರರಾಗಿ ಅವರು ಮಾತನಾಡಿದರು. ಎಲ್ಲಾ ಧರ್ಮಗ್ರಂಥಗಳು ಶಾಂತಿ ಮತ್ತು ಸೌಹಾರ್ಧತೆಯನ್ನು ಭೋದಿಸುತ್ತವೆ. ಆದರೂ ನಾವು ಪರಸ್ಪರ ವೈರತ್ವ ಸಾಧಿಸುತ್ತೇವೆ ಇದು ದುರದೃಷ್ಟಕರ ಎಂದರು. ಕುರಾನ್‌ನ ತತ್ವವನ್ನು ಸಮುದಾಯದ ಯುವ ಜನತೆ ಅರಿತುಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಭಯೋತ್ಪಾಧನೆಗೂ ಇಸ್ಲಾಂಗೂ, ಲವ್ ಜಿಹಾದ್‌ಗೂ ಇಸ್ಲಾಂಗೂ ಯಾವದೇ ಸಂಬAಧವಿಲ್ಲ. ಇಸ್ಲಾಂನಲ್ಲಿ ಇದಕ್ಕೆ ಅವಕಾಶವಿಲ್ಲ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ಅವರವರ ಧರ್ಮಗಳನ್ನು ಬೆಳೆಸುವದು, ಕಾಪಾಡುವದು ಅವರ ಕರ್ತವ್ಯ. ಆದರೆ ಬೇರೆ ಧರ್ಮಗಳನ್ನು ಕೀಳಾಗಿ ಕಾಣವದು ಸರಿಯಲ್ಲ. ಎಲ್ಲರೂ ಸಮಾಜದಲ್ಲಿ ಬದುಕಬೇಕು. ಬೆಳೆಯಬೇಕು ಎಂದರು. ನಾವೆಲ್ಲಾ ಭಾರತೀಯರು. ನಮ್ಮ ಬದುಕೇ ಭಾರತದ್ದು.

ಪ್ರಪಂಚದಲ್ಲಿ ಎಲ್ಲಿ ಹೋದರೂ ನಾವು ಭಾರತೀಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕಾಲ ಕೂಡಿಬಂದಿದೆ. ಇದನ್ನು ನಾವು ಉಳಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಆರ್‌ಎಂಸಿ ಮಾಜಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಮುಖಂಡರಾದ ಎಂ.ಎ. ಮನ್ಸೂರ್ ಅಲಿ, ಎಂ.ಹೆಚ್. ಅಬ್ದುಲ್ ರೆಹಮಾನ್ ಮತ್ತಿತರರಿದ್ದರು.

ಕಾರ್ಯಕ್ರಮವನ್ನು ಉಸ್ತಾದ್ ಅಲ್ ಹಾಜ್ ಕೆ.ಎ. ಮಹಮೂದ್ ಮುಸ್ಲಿಯಾರ್ ಎಡಪಾಲ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಚೆರಿಯಪರಂಬು ಜಮಾಅತ್ ಅಧ್ಯಕ್ಷ ಪಿ.ಎಂ. ಇಬ್ರಾಹಿಂ ವಹಿಸಿದ್ದರು. ಉಸ್ತಾದ್ ಅಲ್ ಹಾಜ್ ಎಂ.ಎA. ಅಬ್ದುಲ್ಲ ಮುಸ್ಲಿಯಾರ್ ಪ್ರಾರ್ಥನೆ, ಚೆರಿಯಪರಂಬು ಜಮಾಅತ್ ಪ್ರಧಾನ ಕಾರ್ಯದರ್ಶಿ ಸಿರಾಜುದ್ದೀನ್ ಸ್ವಾಗತಿಸಿ, ಪಿ.ಎ. ಸಿರಾಜುದ್ದೀನ್ ವಂದಿಸಿದರು.