ಕುಶಾಲನಗರ, ಮಾ. ೮: ನಿನ್ನೆ ತಡರಾತ್ರಿ ೧೧:೩೦ ಗಂಟೆಗೆ ಕುಶಾಲನಗರ ಬಳಿಯ ಅಮನ್ವಾನ ರೆಸಾರ್ಟ್ ಸಮೀಪದಲ್ಲಿ ಓಮ್ನಿ ಹಾಗೂ ಮಾರುತಿ ೮೦೦ ನಡುವೆ ಮುಖಾಮುಖಿ ಡಿಕ್ಕಿ ಆಗಿದ್ದು, ಓಮ್ನಿ ಚಾಲಕ ಭೀಮಯ್ಯ ಅವರು ಗಂಭೀರ ಗಾಯಗೊಂಡ ಪರಿಣಾಮ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಮಕ್ಕಂದೂರು ನಿವಾಸಿ ಸಬ್ಬುಡ ಭೀಮಯ್ಯ (ರಮೇಶ -೪೭), ಅವರ ಪತ್ನಿ ಹಾಗೂ ಮಕ್ಕಳು ಓಮ್ನಿಯಲ್ಲಿ ಕುಶಾಲನಗರಕ್ಕೆ ತೆರಳುತ್ತಿದ್ದ ವೇಳೆ ಎದುರುಗಡೆಯಿಂದ ಮಡಿಕೇರಿಯತ್ತ ಬರುತ್ತಿದ್ದ ಮಾರುತಿ ೮೦೦ ವಾಹನಕ್ಕೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓಮ್ನಿ ಚಾಲಕ ಭೀಮಯ್ಯ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಪತ್ನಿ ಹಾಗೂ ಮಕ್ಕಳಿಗೂ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾರುತಿ ೮೦೦ ವಾಹನ ಚಾಲಕ ಉತ್ತಯ್ಯ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಗೊಂಡ ಭೀಮಯ್ಯ ಅವರನ್ನು ಕುಶಾಲನಗರ ಆಸ್ಪತ್ರೆಗೆ ಸೇರಿಸಿದ್ದು, ಆರೋಗ್ಯ ಸ್ಥಿತಿ ಗಂಭೀರಗೊAಡ ಕಾರಣ ಸುಳ್ಯ ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಕುಶಾಲನಗರ ಸಂಚಾರಿ ಠಾಣೆ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಕ್ರಮ ಕೈಗೊಂಡು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.