ಕುಶಾಲನಗರ, ಮಾ. ೯: ನದಿ ಹೂಳೆತ್ತುವ ಕಾಮಗಾರಿ ಮತ್ತೆ ಆರಂಭಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಭರವಸೆ ನೀಡಿದ್ದಾರೆ.
ಕುಶಾಲನಗರದ ಪ್ರವಾಹ ಪೀಡಿತ ಬಡಾವಣೆಗಳ ಸಂತ್ರಸ್ತರ ಕೋರಿಕೆ ಮೇರೆಗೆ ಕಾವೇರಿ ನದಿ ತಟದ ಕೆಲವು ಬಡಾವಣೆಗಳಿಗೆ ತೆರಳಿದ ಶಾಸಕ ರಂಜನ್ ನದಿಯ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು, ಕಳೆದ ವರ್ಷ ರೂ. ೮೮ ಲಕ್ಷ ವೆಚ್ಚದಲ್ಲಿ ನದಿ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿತ್ತು. ಮಳೆ ಹಿನ್ನೆಲೆಯಲ್ಲಿ ಕಾಮಗಾರಿ ಅಪೂರ್ಣಗೊಂಡಿತ್ತು. ಈ ವರ್ಷ ಮಳೆ ಆರಂಭಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ಕುಶಾಲನಗರದ ಮುತ್ತಪ್ಪ ದೇವಾಲಯ ಬಳಿ, ಸಾಯಿ ಬಡಾವಣೆ, ಕುವೆಂಪು ಬಡಾವಣೆಗಳ ನದಿ ಪ್ರದೇಶಕ್ಕೆ ಶಾಸಕರು ಭೇಟಿ ನೀಡಿದರು. ಕಳೆದ ವರ್ಷ ಕೈಗೊಂಡ ಕಾಮಗಾರಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಮನೆಗಳು ಜಲಾವೃತಗೊಳ್ಳದಿರುವ ಬಗ್ಗೆ ಸಂತ್ರಸ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಶಾಲನಗರ ಪಪಂ ಅಧ್ಯಕ್ಷ ಜೈವರ್ಧನ್, ಜಿಪಂ ಸದಸ್ಯೆ ಮಂಜುಳಾ, ಕುಡಾ ಅಧ್ಯಕ್ಷ ಎಂ.ಎA.ಚರಣ್, ಸದಸ್ಯ ವೈಶಾಖ್, ಪುಂಡರೀಕಾಕ್ಷ, ಬಿಜೆಪಿ ನಗರಾಧ್ಯಕ್ಷ ಉಮಾಶಂಕರ್, ಗುತ್ತಿಗೆದಾರ ಪುರುಷೋತ್ತಮ್ ರೈ, ಬಿಜೆಪಿ ಪ್ರಮುಖರು, ನದಿ ಪ್ರವಾಹ ಸಂತ್ರಸ್ತರು ಇದ್ದರು.