ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ!

ಉತ್ತರಾಖಂಡ್, ಮಾ. ೯: ಉತ್ತರಾಖಂಡ್‌ನ ಆಡಳಿತರೂಢ ಪಕ್ಷ ಬಿಜೆಪಿ ನಾಯಕತ್ವದಲ್ಲಿ ಮಹತ್ವದ ಬದಲಾವಣೆಗೆ ದಾರಿ ಮಾಡಿಕೊಡುವುದಕ್ಕಾಗಿ ಹಾಲಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನೀಡಿದ್ದಾರೆ. ತಾ. ೭ ರಂದು ಗೈರ್ಸೇನ್‌ನಲ್ಲಿ ಬಜೆಟ್ ಅಧಿವೇಶನದ ಸಮಯದಲ್ಲಿ ಬಿಜೆಪಿ ದಿಢೀರ್ ಕೋರ್ ಕಮಿಟಿ ಸಭೆ ನಡೆಸಿದ್ದು ಸರ್ಕಾರದಲ್ಲಿ ಮಹತ್ವದ ಬದಲಾವಣೆಯ ಸುಳಿವು ನೀಡಿತ್ತು. ಈ ಬೆನ್ನಲ್ಲೇ ತ್ರಿವೇಂದ್ರ ಸಿಂಗ್ ರಾವತ್ ತಾ. ೯ ರಂದು ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ. ಉತ್ತರಾಖಂಡ್‌ನಲ್ಲಿ ಬಿಜೆಪಿ ಸರ್ಕಾರ ಅಧಿಕಾರಾವಧಿ ಪೂರ್ಣಗೊಳಿಸುವುದಕ್ಕೆ ಇನ್ನೂ ಒಂದು ವರ್ಷ ಬಾಕಿ ಇರುವಾಗ ನಾಯಕತ್ವದ ಬದಲಾವಣೆಯಾಗಿರುವುದು ಅಚ್ಚರಿ ಮೂಡಿಸಿದೆ. ಬಿಜೆಪಿ ಶಾಸಕರು ತ್ರಿವೇಂದ್ರ ಸಿಂಗ್ ರಾವತ್ ಅವರ ಆಡಳಿತ ಶೈಲಿಯ ಬಗ್ಗೆ ಹೈಕಮಾಂಡ್‌ಗೆ ದೂರು ನೀಡಿದ್ದರು. ಈ ಸಂಬAಧ ತಾ. ೮ ರಂದು ದೆಹಲಿಗೆ ಭೇಟಿ ನೀಡಿದ್ದ ರಾವತ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದರು. ೨೦೧೭ ರಲ್ಲಿ ಸಂಪೂರ್ಣ ಬಹುಮತದೊಂದಿಗೆ ಆಡಳಿತಕ್ಕೇರಿದ್ದ ಬಿಜೆಪಿ ೬೯ ಸಂಖ್ಯಾಬಲ ಇರುವ ವಿಧಾನಸಭೆಯಲ್ಲಿ ೫೭ ಸ್ಥಾನಗಳನ್ನು ಗೆದ್ದಿತ್ತು.

ಕರ್ನಾಟಕ, ಉತ್ತರ ಪ್ರದೇಶದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಕೇಂದ್ರದ ತಾತ್ವಿಕ ಒಪ್ಪಿಗೆ

ನವದೆಹಲಿ, ಮಾ. ೯: ಕರ್ನಾಟಕ, ಉತ್ತರ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂಬ ಮಾಹಿತಿಯನ್ನು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ನೀಡಿದ್ದಾರೆ. ಸಂಸತ್ ಕಲಾಪದಲ್ಲಿ ಈ ವಿಚಾರವಾಗಿ ಮಾತನಾಡಿರುವ ಕೇಂದ್ರ ಸಚಿವರು, ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಗುಜರಾತ್, ಆಂಧ್ರಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಗೋವಾಗಳಿಂದ ಪ್ರಸ್ತಾವನೆಗಳು ಬಂದಿದ್ದವು. ಪ್ರಾಥಮಿಕವಾಗಿ ಸ್ಥಳ, ಅಂದಾಜು ಯೋಜನಾ ವೆಚ್ಚ ಹಾಗೂ ಗಡುವಿನ ದಿನಾಂಕದ ಒಳಗಾಗಿ ಕಾರ್ಯಸಾಧ್ಯತೆಯ ಪ್ರಸ್ತಾವನೆಗಳು ಕರ್ನಾಟಕ, ಉತ್ತರ ಪ್ರದೇಶ, ಬಿಹಾರ ಹಾಗೂ ಹಿಮಾಚಲ ಪ್ರದೇಶಗಳಿಂದ ಬಂದಿತ್ತು. ಈ ಪೈಕಿ ಕರ್ನಾಟಕ ಹಾಗೂ ಉತ್ತರ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಸದಾನಂದ ಗೌಡ ಲಿಖಿತ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದಲ್ಲಿ ಗಂಜಿಮಠ, ದಕ್ಷಿಣ ಕನ್ನಡ ಹಾಗೂ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ತಜ್ಞರ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಪ್ಲಾಸ್ಟಿಕ್ ಪಾರ್ಕ್ಗಳ ಸ್ಥಾಪನೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿದ್ದು, ಪ್ರಾಥಮಿಕ ಪ್ರಸ್ತಾವನೆಗಳ ಕುರಿತು ತಾಂತ್ರಿಕ ಮೌಲ್ಯಮಾಪನವನ್ನು ನಡೆಸಲಾಗುತ್ತಿದೆ ಎಂದು ಸದಾನಂದ ಗೌಡ ಮಾಹಿತಿ ನೀಡಿದ್ದಾರೆ.

ಮಹಿಳಾ ಕ್ರಿಕೆಟ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಲಖನೌ, ಮಾ. ೯: ವೇಗದ ಬೌಲರ್ ಜುಲಾನ್ ಗೋಸ್ವಾಮಿ (೪೨ಕ್ಕೆ ೪) ಬೌಲಿಂಗ್ ಹಾಗೂ ಸ್ಮೃತಿ ಮಂಧಾನಾ (ಅಜೇಯ ೮೦) ಅವರ ಭರ್ಜರಿ ಆಟದ ನೆರವಿನಿಂದ ಭಾರತದ ವನಿತೆಯರು ೯ ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ, ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ೧-೧ ಸಮಬಲ ಸಾಧಿಸಿದ್ದಾರೆ. ಮಂಗಳವಾರ ಅಟಲ್ ಬಿಹಾರಿ ವಾಜಪೇಯಿ ಎಕಾನಾ ಅಂರ‍್ರಾಷ್ಟಿçÃಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ, ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ೪೧ ಓವರ್‌ಗಳಲ್ಲಿ ೧೫೭ ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತೀಯ ಮಹಿಳಾ ತಂಡವು ೨೮.೪ ಓವರ್‌ಗಳಲ್ಲಿ ೧ ವಿಕೆಟ್‌ಗೆ ೧೬೦ ರನ್ ಸೇರಿಸಿ ಜಯ ಸಾಧಿಸಿತು. ಆರಂಭಿಕ ವಿಕೆಟ್ ಕಳೆದುಕೊಂಡ ನಂತರ ಪೂನಂ ಕ್ರೀಸ್‌ಗೆ ಬಂದಿದ್ದರಿAದ ಸ್ಮೃತಿ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಇಬ್ಬರೂ ಆಟಗಾರರು ಉತ್ತಮ ಹೊಡೆತಗಳನ್ನು ಪ್ರಯೋಗಿಸಿ ರನ್ ಕಲೆ ಹಾಕಿದರು, ೨೦೧೬ ರಲ್ಲಿ ಐಸಿಸಿ ಮಹಿಳಾ ತಂಡದಲ್ಲಿ ಆಯ್ಕೆಯಾದ ೨೪ ವರ್ಷದ ಎಡಗೈ ಬ್ಯಾಟ್ಸ್ಮನ್ ಸ್ಮೃತಿ, ತಮ್ಮ ೧೯ನೇ ಅರ್ಧಶತಕವನ್ನು ಪುರೈಸಿದರು. ಮಂಧಾನಾ ಕೇವಲ ೬೪ ಎಸೆತಗಳಲ್ಲಿ ಅಜೇಯ ೮೦ ರನ್ ಗಳಿಸಿದರು, ಇದರಲ್ಲಿ ೧೦ ಬೌಂಡರಿ ಮತ್ತು ಮೂರು ಸಿಕ್ಸರ್‌ಗಳು ಸೇರಿವೆ. ಇನ್ನೊಂದು ತುದಿಯಲ್ಲಿ ಪೂನಂ ರೌತ್ ಬ್ಯಾಟ್ ಮಾಡಿ ೧೫ನೇ ಅರ್ಧಶತಕವನ್ನು ಪೂರೈಸಿದರು. ರೈಲ್ವೆ ಮತ್ತು ಮುಂಬೈ ಪರ ಪ್ರಥಮ ದರ್ಜೆ ಪಂದ್ಯವನ್ನು ಆಡಿದ ಪೂನಮ್ ೮೯ ಎಸೆತಗಳಲ್ಲಿ ಅಜೇಯ ೬೨ ರನ್ ಗಳಿಸಿದ್ದರು. ಇದಕ್ಕೂ ಮೊದಲು ಟಾಸ್ ಗೆದ್ದ ಭಾರತದ ನಾಯಕ ಮಿಥಾಲಿ ರಾಜ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ವೇಗದ ಬೌಲರ್ ಜುಲಾನ್ ಗೋಸ್ವಾಮಿ (೪೨ ರನ್‌ಗಳಿಗೆ ನಾಲ್ಕು ವಿಕೆಟ್), ಮಾನ್ಸಿ ಜೋಶಿ (೨೩ ರನ್‌ಗೆ ಎರಡು ವಿಕೆಟ್) ಮತ್ತು ರಾಜೇಶ್ವರಿ ಗಾಯಕ್ವಾಡ್ (೩೭ ರನ್‌ಗಳಿಗೆ ಮೂರು ವಿಕೆಟ್) ನಾಯಕಿಯ ನಿರ್ಧಾರವನ್ನು ಸಮರ್ಥಿಸಿಕೊಂಡರು.

ರಾಜ್ಯದಲ್ಲಿ ಸ್ವಯಂ ರಕ್ಷಣೆ ಯೋಧರ ಪಡೆ ರಚನೆ

ಬೆಂಗಳೂರು, ಮಾ. ೯: ರಾಜ್ಯದಲ್ಲಿ ಸ್ವಯಂ ರಕ್ಷಣೆ ಯೋಧರ ಪಡೆ(ಸೆಲ್ಫ್ ಡಿಫೆನ್ಸ್ ಆರ್ಮಿ)ಯನ್ನು ರಚನೆ ಮಾಡಬೇಕಾದ ಅಗತ್ಯ ಇರುವುದರಿಂದ ರಾಜ್ಯ ಮಟ್ಟದಲ್ಲಿ ಗೃಹ ಇಲಾಖೆಯಿಂದ ಹೊಸ ಯೋಜನೆಯೊಂದನ್ನು ಜಾರಿಗೊಳಿಸಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮಂಗಳವಾರ ನಗರದಲ್ಲಿ ಕರ್ನಾಟಕ ರಾಜ್ಯ ಮೀಸಲು ಪಡೆ (ಕೆಎಸ್‌ಆರ್‌ಪಿ) ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ ಶಸ್ತç ರಹಿತ ಸ್ವಯಂ ರಕ್ಷಣಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗಾಗಿ ಸ್ವಯಂ ರಕ್ಷಣಾ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ಇಂದಿನ ಆಧುನಿಕ ಕಾಲದಲ್ಲಿ ಮಹಿಳೆಯರ ಸುರಕ್ಷತೆ ದೊಡ್ಡ ಸವಾಲು ಆಗಿದೆ. ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳುವಷ್ಟು ಶಕ್ತಿವಂತರಾಗಬೇಕಾಗಿದೆ. ಹೀಗಾಗಿ ಸ್ವಯಂ ರಕ್ಷಣಾ ತರಬೇತಿ ಅಗತ್ಯವಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗಾಗಿ ಈ ರೀತಿಯ ತರಬೇತಿ ನೀಡಲು ಕೆಎಸ್‌ಆರ್‌ಪಿ ಯೋಜನೆ ಹಾಕಿಕೊಂಡಿರುವುದು ಸ್ವಾಗತಾರ್ಹ. ಇದಕ್ಕಾಗಿ ತಾವು ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್ ಮತ್ತು ಕೆಎಸ್‌ಆರ್‌ಪಿ ಮುಖ್ಯಸ್ಥ ಅಲೋಕ್‌ಕುಮಾರ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಅವರು ತಿಳಿಸಿದರು.