ಮಡಿಕೇರಿ, ಮಾ. ೯: ಮಡಿಕೇರಿ-ಸುಂಟಿಕೊಪ್ಪ ರಸ್ತೆಯ ಸಿಂಕೋನ ಎಸ್ಟೇಟ್ ಬಳಿ ಪಾದಚಾರಿಗೆ ಅಪರಿಚಿತ ವಾಹನವೊಂದು ಡಿಕ್ಕಿಪಡಿಸಿ ಪರಾರಿಯಾದ ಪರಿಣಾಮ, ಪಾದಚಾರಿ ಬೈಚನಹಳ್ಳಿ ನಿವಾಸಿ, ಅರುಣ ಅವರ ತಲೆಯ ಭಾಗಕ್ಕೆ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾ. ೯ ರ ಬೆಳಿಗ್ಗೆ ಸುಮಾರು ೫.೩೦ಕ್ಕೆ ಅರುಣ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಬಿದ್ದಿದ್ದನ್ನು ಗಮನಿಸಿದ ದಾರಿಹೋಕರೋರ್ವರು ಆ್ಯಂಬುಲೆನ್ಸ್ಗೆ ಮಾಹಿತಿ ನೀಡಿದ್ದಾರೆ. ಮಡಿಕೇರಿ ಜಿಲ್ಲಾಸ್ಪತ್ರೆಗೆ ಗಾಯಾಳು ಅರುಣ ಅವರನ್ನು ಕರೆದೊಯ್ದು ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಠಾಣಾಧಿಕಾರಿ ರವಿಕಿರಣ್ ನೇತೃತ್ವದಲ್ಲಿ ಗ್ರಾಮಾಂತರ ಠಾಣಾ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಪರಿಚಿತ ವಾಹನ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ. ಅರುಣ ಅವರು ಕೂಲಿ ಕೆಲಸ ನಿಮಿತ್ತ ತಾ. ೭ ರಂದೇ ತಮ್ಮ ಮನೆಯಿಂದ ಹೊರಟಿದ್ದು, ಮನೆಗೆ ಹಿಂತಿರುಗಿರಲಿಲ್ಲ. ಇಂದು ಘಟನೆ ನಡೆದಿದ್ದು ತಿಳಿದ ಬಳಿಕ ಅರುಣ ಅವರ ತಾಯಿ ಜಯಮ್ಮ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.