ಶಾಸಕ ಬೋಪಯ್ಯ
*ಗೋಣಿಕೊಪ್ಪಲು, ಮಾ. ೬: ಬೇಸಿಗೆಯಲ್ಲಿ ನೀರಿನ ಅಭಾವವನ್ನು ನೀಗಿಸಲು ಕೇಂದ್ರ ಸರ್ಕಾರ ಜಲ್‌ಜೀವನ್ ಯೋಜನೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಗ್ರಾಮೀಣ ಪ್ರದೇಶದ ಪ್ರತಿ ಮನೆ ಮನೆಗಳಿಗೆ ಕುಡಿಯಲು ನಲ್ಲಿ ನೀರು ಸಂಪರ್ಕ ವ್ಯವಸ್ಥೆ ಜಾರಿಗೆ ತಂದಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಅಭಾವವನ್ನು ನೀಗಿಸಬಹುದಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ತಿಳಿಸಿದರು. ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಜಲ್‌ಜೀವನ್ ಯೋಜನೆಯ ಅನುಷ್ಠಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಮತ್ತು ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿದರೆ ಉತ್ತಮ ಅಭಿವೃದ್ಧಿಯ ಬೆಳವಣಿಗೆ ಹೊಂದಲಿದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಗ್ರಾಮಗಳಿಗೆ ಹೆಚ್ಚಿನ ಅನುದಾನವನ್ನು ನೀಡಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿಗೂ ೧೫ನೇ ಹಣಕಾಸು ಯೋಜನೆಯಡಿ ಕೇಂದ್ರ ಸರ್ಕಾರ ಅನುದಾನವನ್ನು ನೀಡುತ್ತಿದೆ. ಇದರೊಂದಿಗೆ ರಾಜ್ಯ ಸರ್ಕಾರವು ಅಭಿವೃದ್ಧಿಗೆ ಪೂರಕವಾಗಿ ಅನುಧಾನವನ್ನು ನೀಡುವ ಮೂಲಕ ಜನರು ಸರ್ಕಾರದ ಮೇಲೆ ಇಟ್ಟಿರುವ ಭರವಸೆಗೆ ಸ್ಪಂದಿಸುತ್ತಿದೆ ಎಂದು ಹೇಳಿದರು. ಈ ಸಂದರ್ಭ ರೂ. ೯ ಲಕ್ಷ ವೆಚ್ಚದಲ್ಲಿ ಕೊಡವ ಸಮಾಜದಿಂದ ಮೇದಗೇರಿ ಕಾಲೋನಿಗೆ ಹೋಗುವ ರಸ್ತೆ ಕಾಮಗಾರಿಗೆ, ೫ ಲಕ್ಷ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗೆ ಸೇರಿದಂತೆ ಒಟ್ಟು ರೂ. ೧೪ ಲಕ್ಷದಲ್ಲಿ ರಸ್ತೆ ಕಾಮಗಾರಿಗಳಿಗೆ ಹಾಗೂ ರೂ. ೧೦ ಲಕ್ಷ ಅನುದಾನದಲ್ಲಿ ನಿರ್ಮಾಣ ವಾದ ಕಾಂಕ್ರಿಟ್ ರಸ್ತೆ ಸಂಚಾರಕ್ಕೆ ಚಾಲನೆ ಹಾಗೂ ೮೬ ಲಕ್ಷ ಅನುದಾನದ ೧೮೦ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಒದಗಿಸಲು ಚಾಲನೆ ನೀಡಿದರು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ತಾಲೂಕು ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಅಧ್ಯಕ್ಷ ಕಾಡ್ಯಮಾಡ ಗಿರೀಶ್‌ಗಣಪತಿ, ಆರ್.ಎಂ.ಸಿ. ಅಧ್ಯಕ್ಷ ಅಜ್ಜಿಕುಟ್ಟೀರ ಪ್ರವೀಣ್‌ಮುತ್ತಪ್ಪ, ಪೊನ್ನಂಪೇಟೆ ಮಹಾಶಕ್ತಿ ಕೇಂದ್ರದ ಪ್ರಮುಖ್ ಅಲೇಮಾಡ ಸುದೀರ್, ಶಕ್ತಿ ಕೇಂದ್ರ ಕೇಚಟ್ಟೀರ ಅರುಣ ಅಪ್ಪಣ್ಣ, ಬೊಜ್ಜಂಗಡ ಸುನೀಲ್, ಜಿಲ್ಲಾ ಬಿಜೆಪಿ ಘಟಕ ಉಪಾಧ್ಯಕ್ಷೆ ತೀತಿರ ಊರ್ಮಿಳ ಸೋಮಯ್ಯ, ಅಧ್ಯಕ್ಷ ಚಂದ್ರಪ್ರಕಾಶ್, ಉಪಾಧ್ಯಕ್ಷ ದಮಯಂತಿ, ಸದಸ್ಯರಾದ ಕಿರಿಯಮಾಡ ಮಿಲನ್‌ಗಣಪತಿ, ಚೋಂದು, ಬಿಜೆಪಿ ತಾಲೂಕು ಖಜಾಂಚಿ ಚೋಡುಮಾಡ ಶ್ಯಾಮ್, ಪ್ರಮುಖರಾದ ಐಪುಮಾಡ ರೋನಿ, ದಿನೇಶ್ ಚಿಟ್ಟಿಯಪ್ಪ ಹಾಜರಿದ್ದರು.
-ಎನ್.ಎನ್. ದಿನೇಶ್