*ಗೋಣಿಕೊಪ್ಪಲು, ಮಾ. ೫: ಪ್ರತಿನಿತ್ಯ ಒತ್ತಡದಲ್ಲಿ ಕಾರ್ಯನಿರ್ವ ಹಿಸುವ ಸರ್ಕಾರಿ ನೌಕರರು ಒಂದು ದಿನದ ಕ್ರೀಡಾಕೂಟದಲ್ಲಿ ಭಾಗಿಯಾಗಿ ಉಲ್ಲಾಸಿತರಾದರು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಕ್ರೀಡಾ ಮೈದಾನದಲ್ಲಿ ವೀರಾಜಪೇಟೆ ತಾಲೂಕು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ನೌಕರರ ಸಂಘದ ವತಿಯಿಂದ ನಡೆದ ಕ್ರೀಡಾ ಕೂಟ ಸುಮಾರು ೧೫೦ ನೌಕರರ ಮನೋಲ್ಲಾಸಕ್ಕೆ ಕಾರಣವಾಯಿತು. ಕ್ರಿಕೆಟ್, ಹಗ್ಗಜಗ್ಗಾಟ, ಥ್ರೋಬಾಲ್, ವಿಷದ ಚೆಂಡು, ಲೆಮನ್ ಸ್ಪೂನ್, ರಸಪ್ರಶ್ನೆ ಸೇರಿದಂತೆ ಹಲವು ಕ್ರೀಡಾ ಚಟುವಟಿಕೆಗಳು ನಡೆದವು. ಕ್ರೀಡಾ ಕೂಟಕ್ಕೆ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕ್ರೀಡೆಯಿಂದ ದೇಹ ಧೃಡತೆ ಹೊಂದುವುದಲ್ಲದೇ ಮನಸ್ಸಿನ ಏಕಾಗ್ರತೆಯನ್ನು ಹೊಂದಲು ಸಾಧ್ಯ. ಪ್ರತಿನಿತ್ಯ ಕ್ರೀಡಾಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಒಂದಷ್ಟು ಸಮಯವನ್ನು ಮೀಸಲಿಡಬೇಕು. ಇದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನೌಕರರ ಸಂಘದ ಅಧ್ಯಕ್ಷ ಮಣಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ, ತಾ.ಪಂ. ವ್ಯವಸ್ಥಾಪಕಿ ಕೆ.ಆರ್. ಸ್ವರೂಪ್, ಕೋಶಾಧಿಕಾರಿ ರವಿ ಹಾಗೂ ಪದಾಧಿಕಾರಿಗಳು, ಸಂಘದ ಸದಸ್ಯರು ಹಾಜರಿದ್ದರು.