ವೀಣಾ ಅಚ್ಚಯ್ಯ ಪ್ರಶ್ನೆಗೆ ಕೆ.ಎಸ್. ಈಶ್ವರಪ್ಪ ಉತ್ತರ

ಮಡಿಕೇರಿ, ಮಾ. ೫: ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆಗಳ ದುರಸ್ತಿಗೆ ಕೈಗೊಂಡ ಕ್ರಮ ಹಾಗೂ ಕಾಮಗಾರಿಗಳ ಬಾಕಿ ಹಣ ಪಾವತಿಯಾಗದ ಬಗ್ಗೆ ಮೇಲ್ಮನೆಯಲ್ಲಿ ವೀಣಾ ಅಚ್ಚಯ್ಯ ಅವರು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಪ್ರಶ್ನಿಸಿದರು. ಗುತ್ತಿಗೆದಾರರಿಗೆ ಸಮರ್ಪಕವಾಗಿ ಹಣ ಪಾವತಿಯಾಗಿದೆಯೇ ಎಂದು ವೀಣಾ ಅಚ್ಚಯ್ಯ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷದಲ್ಲಿ ಕಂದಾಯ ಇಲಾಖೆ ಮೂಲಕ ಮಳೆಯಿಂದ ಹಾನಿಗೊಳಗಾದ ೪೨೭ ಕಾಮಗಾರಿಗಳ ನಿರ್ವಹಣೆಗೆ ೨೦೧೯-೨೦ನೇ ಸಾಲಿನಲ್ಲಿ ರೂ. ೪೦ ಕೋಟಿ ಜಿಲ್ಲಾಧಿಕಾರಿಗೆ ಬಿಡುಗಡೆ ಮಾಡಲಾಗಿದ್ದು, ಈ ಪೈಕಿ ರೂ ೧೦.೬೬ ಕೋಟಿಗಳನ್ನು ಜಿ.ಪಂ. ಸಿ.ಇ.ಓ ಅವರಿಗೆ ಬಿಡುಗಡೆ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಗ್ರಾಮೀಣ ೮೪೭ ರಸ್ತೆ ಅಭಿವೃದ್ಧಿಗೆ ಕ್ರಮಕೈಗೊಂಡಿದ್ದು, ೪೧೯೪ ಲಕ್ಷ ರೂ ಮಂಜೂರಾತಿಗೊAಡಿದ್ದು, ೨೪೯೯.೭೭ ಲಕ್ಷ ರೂ ಬಿಡುಗಡೆಗೆ ಬಾಕಿ ಇದೆ. ಈಗಾಗಲೇ ಕಾಮಗಾರಿ ಪ್ರಗತಿ ಆದರಿಸಿ ಗುತ್ತಿಗೆದಾರರಿಗೆ ಹಣ ಪಾವತಿಸಲು ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು.