ಗೋಣಿಕೊಪ್ಪಲು, ಮಾ.೫: ಬುಡಕಟ್ಟು ಕಾರ್ಮಿಕರ ಸಂಘದ ವತಿಯಿಂದ ಪೊನ್ನಂಪೇಟೆ ತಾಲೂಕು ಪಂಚಾಯ್ತಿ ಆವರಣದಲ್ಲಿ ನಡೆಯುತ್ತಿರುವ ಅಹೋರಾತ್ರಿ ಚಳುವಳಿಯು ೫ನೇ ದಿನಕ್ಕೆ ಕಾಲಿಟ್ಟದೆ. ಹಾತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಂದ ಬಳಿ ಇರುವ ಬಸವೇಶ್ವರ ಬಡಾವಣೆಯ ನೂರಕ್ಕೂ ಅಧಿಕ ಗ್ರಾಮ ನಿವಾಸಿಗಳು ಬಡಾವಣೆಯ ಅಧ್ಯಕ್ಷ ವೈ.ಬಿ. ಗಪ್ಪು ಮುಂದಾಳತ್ವದಲ್ಲಿ ೧೧೬ಕುಟುಂಬಗಳು ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದಾರೆ.
ಸರ್ಕಾರ ಹಕ್ಕು ಪತ್ರ ನೀಡಿದ್ದರೂ ಇಲ್ಲಿಯ ತನಕ ಮನೆ ನಿರ್ಮಾಣ ಮಾಡಿಲ್ಲ. ಕೇವಲ ಕಾನೂನಿನ ಅಡೆತಡೆಗಳನ್ನೇ ನೆಪವಾಗಿಟ್ಟುಕೊಂಡು ಅಧಿಕಾರಿಗಳು ಮೂಲ ಸೌಕರ್ಯ ಗಳನ್ನು ಒದಗಿಸಲು ವಿಫಲರಾಗಿದ್ದಾರೆ. ಆದ್ದರಿಂದ ನ್ಯಾಯ ಸಿಗುವವರೆಗೂ ಅಹೋರಾತ್ರಿ ಚಳುವಳಿಗೆ ನಿರ್ಧರಿಸಿರುವುದಾಗಿ ಹೋರಾಟದ ಮುಂದಾಳು ಬೋಜ ತಿಳಿಸಿದರು.
ಮನೆ ಆದೇಶ ಪತ್ರ ನೀಡುವವರೆಗೂ ಚಳುವಳಿಯನ್ನು ನಡೆಸುತ್ತೇವೆ. ಹಲವು ಅಧಿಕಾರಿಗಳು ಹಲವು ರೀತಿಯ ಭರವಸೆ ನೀಡಿದ್ದರೂ ಇಲ್ಲಿಯ ತನಕ ಯಾವುದೇ ಭರವಸೆಗಳು ಈಡೇರಲಿಲ್ಲ. ಆದ್ದರಿಂದಾಗಿ ನಾವು ಅನಿವಾರ್ಯ ವಾಗಿ ಮಹಿಳೆ, ಮಕ್ಕಳಾದಿಯಾಗಿ ಚಳುವಳಿಗೆ ಇಳಿಯಬೇಕಾಯಿತು. ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳಾದ ಕೊಣಿಯಂಡ ಅಪ್ಪಣ್ಣ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಇಲಾಖೆಯು ತಮ್ಮ ಬೇಡಿಕೆಗಳನ್ನು ಹಂತಹAತವಾಗಿ ಬಗೆ ಹರಿಸಲಿದೆ. ಈಗಾಗಲೇ ತಹಶೀಲ್ದಾರ್ ಐಟಿಡಿಪಿ ಅಧಿಕಾರಿಗಳು ತಮ್ಮ ಸಮಸ್ಯೆಗಳಿಗೆ ಪರಿಹಾರಿಸಲು ಶ್ರಮ ವಹಿಸಿದ್ದಾರೆ. ತಮ್ಮ ದಾಖಲೆಗಳನ್ನು ಸರಿ ಮಾಡಲು ಇನ್ನಷ್ಟು ಸಮಯಗಳು ಬೇಕಾಗಿವೆ. ತಾವುಗಳು ಹೋರಾಟವನ್ನು ನಿಲ್ಲಿಸಿ ತಮ್ಮ ಮನೆಗೆ ತೆರಳುವಂತೆ ಮನವಿ ಮಾಡಿದರು. ಆದರೆ ಪ್ರತಿಭಟನಾಕಾರರು ನಮಗೆ ಮನೆ ನಿರ್ಮಾಣದ ಆದೇಶ ಪತ್ರ ಲಭಿಸದೆ ಇಲ್ಲಿಂದ ತೆರಳಲು ಸಾಧ್ಯವಿಲ್ಲವೆಂದು ಹಠಕ್ಕೆ ಬಿದ್ದರು.
ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ, ಕೇಚಮಾಡ ಸರಿತಾ ಪೂಣಚ್ಚ ಭೇಟಿ ನೀಡಿದರು. ಪ್ರತಿಭಟನೆಯಲ್ಲಿ ಗಣೇಶ್, ಬೋಜ, ಗಪ್ಪು ಮುಂತಾದವರು ಹಾಜರಿದ್ದರು.
-ಹೆಚ್.ಕೆ.ಜಗದೀಶ್