ಕೊಡ್ಲಿಪೇಟೆ, ಮಾ. ೫: ಐ.ಎನ್.ಟಿ.ಯು.ಸಿ. ವತಿಯಿಂದ ಸಮೀಪದ ಬೆಸೂರು ಗ್ರಾಮದ ಸಮುದಾಯ ಭವನದ ಆವರಣದಲ್ಲಿ ಕಾರ್ಮಿಕರ ಸದಸ್ಯತ್ವ ಅಭಿಯಾನ ಹಾಗೂ ಕಾರ್ಮಿಕರ ನೋಂದಣಿ ಕಾರ್ಯಕ್ರಮ ನಡೆಯಿತು.

ಅಭಿಯಾನವನ್ನು ಐ.ಎನ್.ಟಿ. ಯು.ಸಿ. ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಉದ್ಘಾಟಿಸಿ ಮಾತನಾಡಿ, ಸದಸ್ಯತ್ವದ ಮಹತ್ವದ ಬಗ್ಗೆ ವಿವರಿಸಿದರು.

ಸಂಘಟನೆಯ ವತಿಯಿಂದ ಜಿಲ್ಲಾದ್ಯಂತ ಕಾರ್ಮಿಕರ ನೋಂದಣಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಸದುಪಯೋಗಪಡಿಸಿ ಕೊಳ್ಳುವಂತೆ ಕರೆ ನೀಡಿದರು,

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಜಿಲ್ಲಾಧ್ಯಕ್ಷ ಟಿ.ಡಿ. ಗೋವಿಂದರಾಜ ದಾಸ್ ಮಾತನಾಡಿ, ಸದಸ್ಯತ್ವದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುವದು.

ನೋಂದಾಯಿತ ಸದಸ್ಯರಿಗೆ ಸರ್ಕಾರದಿಂದ ಹಲವಷ್ಟು ಸೌಲಭ್ಯಗಳಿದ್ದು, ಇವುಗಳನ್ನು ಬಳಸಿಕೊಳ್ಳಲು ಮುಂದೆ ಬರಬೇಕು ಎಂದರು.

ತಾಲೂಕು ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಪ್ರಾಣೇಶ್, ಸೈಯದ್ ಅವರು ಇಲಾಖೆಗೆ ಸಂಬAಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು, ಸಭೆಯಲ್ಲಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಂತ್ ಕುಮಾರ್, ಬೆಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೀರ್ತಿ, ಸದಸ್ಯರಾದ ಸವಿತಾ ,ಪ್ರಮುಖರಾದ ಅಜ್ಜಳ್ಳಿ ರವಿ, ಟಿ.ಇ. ಸುರೇಶ್, ಜನಾರ್ಧನ್, ಹೂವಯ್ಯ, ಮಂಜು, ಇಂದ್ರೇಶ್, ನಂಜಪ್ಪ, ಧರ್ಮಣ್ಣ, ಮಲ್ಲೇಶ್, ಚಂದ್ರಶೇಖರ್ ಸೇರಿದಂತೆ ಇತರರು ಹಾಜರಿದ್ದರು. ಕಾರ್ಯಕ್ರಮದಲ್ಲಿ ೨೦೨ ಮಂದಿ ವಿವಿಧ ವರ್ಗದ ಕಾರ್ಮಿಕರು ತಮ್ಮ ಸದಸ್ಯತ್ವವನ್ನು ನೋಂದಾಯಿಸಿ ಕೊಂಡರು.