ಓರ್ವ ಬಲಿ

ನಾಪೋಕ್ಲು, ಮಾ. ೫: ಪಟ್ಟಣದಲ್ಲಿ ಹೆಜ್ಜೇನುಗಳು ಜನರ ಮೇಲೆ ದಾಳಿ ನಡೆಸಿದ್ದು, ಹಲವರಿಗೆ ಗಾಯಗಳಾಗಿ ಓರ್ವ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ. ಹೆಜ್ಜೇನುಗಳು ತೀವ್ರವಾಗಿ ಕಚ್ಚಿದ್ದರಿಂದ ಇಲ್ಲಿನ ಅಜ್ಜಿಮುಟ್ಟ ನಿವಾಸಿ ಟಿ.ಕೆ. ವೇಲಾಯುಧನ್ (೬೮) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಪಟ್ಟಣದಲ್ಲಿ ಹಲವರಿಗೆ ಹೆಜ್ಜೇನು ಕಚ್ಚಿದೆ ಎನ್ನಲಾಗಿದೆ. ಹೆಜ್ಜೇನು ಕಡಿತದಿಂದ ಗಾಯಗೊಂಡಿರುವ ಹಲವರು ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮಣವಟ್ಟೀರ ಗಗನ್ (೨೫) ಎಂಬ ವರಿಗೆ ಸುಮಾರು ೨೫ ನೊಣಗಳು ಕಚ್ಚಿದೆ ಹಾಗೂ ವೇಲಾಯುಧನ್ (೩೫) ಎಂ.ಟಿ. ಸುರೇಶ (೨೯), ಸೇರಿದಂತೆ ೧೦ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಮೀಪದ ಹಳೆತಾಲೂಕಿನಿಂದ ಪಟ್ಟಣದೆಡೆಗೆ ಬರುತ್ತಿರುವಾಗ ಹೆಜ್ಜೇನುಗಳು ದಾಳಿ ನಡೆಸಿದವು ಎಂದು ಸುರೇಶ್ ಪ್ರತಿಕ್ರಿಯಿಸಿದರು. ಮತ್ತೆ ಕೆಲವರು ಗಾಬರಿಯಿಂದ ಸುರಕ್ಷಿತ ತಾಣಗಳಲ್ಲಿ ಅಡಗಿ ಹೆಜ್ಜೇನುಗಳಿಂದ ತಪ್ಪಿಸಿಕೊಂಡರೆನ್ನಲಾಗಿದೆ. ಆದರೆ ಅಜ್ಜಿಮುಟ್ಟ ಗ್ರಾಮದ ವೇಲಾಯುಧನ್ ತಾವು ತಮ್ಮ ಮನೆಗೆ ಹೋಗಲು ಕೊಡವ ಸಮಾಜದ ದಾರಿಗಾಗಿ ಬರುತ್ತಿರುವಾಗ ಹೆಜ್ಜೇನುಗಳು ಅವರ ಮೇಲೆ ಏಕಾಏಕಿ ಮಾರಣಾಂತಿಕ ದಾಳಿ ನಡೆಸಿವೆ. ಕೂಡಲೇ ನಾಗರಿಕರು ಇವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಹೆಜ್ಜೇನು ಕಚ್ಚಿದ ಪರಿಣಾಮ ಇವರ ಪ್ರಾಣ ಪಕ್ಷಿ ಹಾರಿಹೋಗಿದೆ. ಮೃತ ವೇಲಾಯುಧನ್ ಕೂಲಿ ಕಾರ್ಮಿಕ ರಾಗಿದ್ದರು. ಪತ್ನಿ ಶೀಲಾ, ೨ ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

ಹೆಜ್ಜೇನುಗಳ ದಂಡು ಎಲ್ಲಿಂದ ಬಂದವು ಎಂಬ ಬಗ್ಗೆ ನಾಗರಿಕರು ಕುತೂಹಲ ವ್ಯಕ್ತಪಡಿಸಿದ್ದಾರೆ. ಏಕಾಏಕಿ ಹೆಜ್ಜೇನು ಹಿಂಡು ಧಾಳಿ ನಡೆಸಿ ಒಬ್ಬರು ಮೃತಪಟ್ಟಿರುವುದು ಪಟ್ಟಣದಲ್ಲಿ ಜನರ ಆತಂಕಕ್ಕೆ ಕಾರಣವಾಗಿದೆ.

- ದುಗ್ಗಳ ಸದಾನಂದ.