ಸೋಮವಾರಪೇಟೆ, ಮಾ. ೫: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸೋಮವಾರಪೇಟೆ ಕ್ಷೇತ್ರ ಸಂಪನ್ಮೂಲ ಕೇಂದ್ರದ ವತಿಯಿಂದ ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯರಿಗೆ ತರಬೇತಿ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರವನ್ನು ಗರ್ವಾಲೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಎ. ನಂಜುAಡ ಉದ್ಘಾಟಿಸಿದರು. ನಂತರ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಪ್ರತಿಯೊಬ್ಬರೂ ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು. ಎಸ್.ಡಿ.ಎಂ.ಸಿ.ಸದಸ್ಯರು ಆಗಿಂದಾಗ್ಗೆ ಶಾಲೆಗೆ ಭೇಟಿ ನೀಡಿ ಶಾಲೆಯ ಅಭಿವೃದ್ದಿ ಜತೆಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕರಿಸಬೇಕು ಎಂದರು. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಈ ಎರಡೂ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ನಂಜುAಡ ಅವರು ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಗರ್ವಾಲೆ ಗ್ರಾಮ ಪಂಚಾಯತಿ ಸದಸ್ಯೆ ಮುದ್ದಂಡ ಎಂ. ಚಿಣ್ಣಮ್ಮ ಮಾತನಾಡಿ, ಹತ್ತಾರು ಕಿ.ಮೀ. ವ್ಯಾಪ್ತಿಯಲ್ಲಿ ಸೂರ್ಲಬ್ಬಿಯಲ್ಲಿರುವ ಏಕೈಕ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳನ್ನು ಉಳಿಸಿಕೊಳ್ಳುವ ಮೂಲಕ ಸ್ಥಳೀಯ ಮಕ್ಕಳ ಶಿಕ್ಷಣಕ್ಕೆ ಎಲ್ಲರೂ ಕಂಕಣಬದ್ಧವಾಗಿರಬೇಕು ಎಂದರು.
ಸೂರ್ಲಬ್ಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಎಸ್.ಎಸ್. ಅಭಿಷೇಕ್, ಶಾಲೆಗಳಲ್ಲಿ ಕೋವಿಡ್ -೧೯ ರ ಮಾರ್ಗಸೂಚಿಯನ್ವಯ ಪೋಷಕರು ಹಾಗೂ ವಿದ್ಯಾರ್ಥಿಗಳು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಆರೋಗ್ಯ ರಕ್ಷಣೆ ಕುರಿತು ಮಾಹಿತಿ ನೀಡಿದರು.
ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಎನ್.ಎಲ್. ಪ್ರೀತಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾದಾಪುರ ಕ್ಲಸ್ಟರ್‌ನ ಸಿ.ಆರ್.ಪಿ. ಬಿ.ಎನ್. ವಸಂತಕುಮಾರ್, ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಬಿ.ಎಂ. ಸುಂದರಿ, ಸಂಪನ್ಮೂಲ ಶಿಕ್ಷಕರಾದ ಕೆ.ಡಿ. ರಜಿತ, ಎಂ.ಟಿ. ಪೂವಯ್ಯ ಹಾಗೂ ಅಂಜನ ಬೆಟ್ಟಗೇರಿ ಶಾಲೆಯ ಶಿಕ್ಷಕ ಕೆ.ಎಲ್. ಉದಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷ ಕೆ.ಎ ನಂಜುAಡ ಹಾಗೂ ಸದಸ್ಯೆ ಎಂ.ಎA. ಚಿಣ್ಣಮ್ಮ ಅವರನ್ನು ಅಭಿನಂದಿಸಲಾಯಿತು.