ವೀರಾಜಪೇಟೆ, ಮಾ. ೫ : ವೀರಾಜಪೇಟೆ ಪಟ್ಟಣ ಪಂಚಾಯಿತಿಯ ವ್ಯಾಪ್ತಿಗೆ ಬರುವ ಎಲ್ಲ ಮನೆ ಕಟ್ಟಡ ಸೇರಿದಂತೆ ಆಸ್ತಿ ತೆರಿಗೆಯನ್ನು ಶೇ. ೩ರಷ್ಟು ಪಟ್ಟಣ ಪಂಚಾಯಿತಿ ತೀರ್ಮಾನಿಸಿದೆ.
ಪಟ್ಟಣ ಪಂಚಾಯಿತಿಯ ತುರ್ತು ವಿಶೇಷ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ರಾಜ್ಯ ಸರಕಾರದ ಸುತ್ತೋಲೆಯಂತೆ ೨೦೨೧-೨೨ನೇ ಸಾಲಿಗೆ ಆಸ್ತಿ ತೆರಿಗೆಯನ್ನು ಪರಿಷ್ಕರಿಸುವಂತೆ ತೀರ್ಮಾನಿಸಲಾಗಿದ್ದು, ಸದಸ್ಯರುಗಳ ವಿಚಾರ ವಿನಿಮಯದ ನಂತರ ತುರ್ತುಸಭೆಯ ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಟಿ.ಆರ್.ಸುಶ್ಮಿತಾ ಅವರು ಪಟ್ಟಣ ಪಂಚಾಯಿತಿಗೆ ಬಹುತೇಕ ಸದಸ್ಯರಿಗೆ ಸಮಾಧಾನವಾಗುವ ರೀತಿಯಲ್ಲಿ ಆಸ್ತಿ ತೆರಿಗೆಯನ್ನು ಶೇ.೩ ರಷ್ಟು ಏರಿಸುವ ಬಗ್ಗೆ ಪ್ರಕಟಿಸಿದರು.
ಸದಸ್ಯ ಸಿ.ಕೆ.ಪ್ರಥ್ವಿನಾಥ್ ಅವರು ಸರಕಾರದ ಆಸ್ತಿ ತೆರಿಗೆ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದರು. ಮಡಿಕೇರಿ ನಗರಸಭೆ, ಇತರ ಪುರಸಭೆಗಳ ತೆರಿಗೆಯನ್ನು ಹೋಲಿಸಿದಾಗ ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳವಾಗಿದೆ. ಇದೇ ತೆರಿಗೆಯನ್ನು ಮುಂದುವರೆಸಿದರೆ ಕಟ್ಟಡದಾರರಿಗೆ ಅನುಕೂಲವಾಗಲಿದೆ. ಪಟ್ಟಣ ಪಂಚಾಯಿತಿಯಲ್ಲಿ ಮೂರು ವರ್ಷಕ್ಕೆ ವೈಜ್ಞಾನಿಕವಾಗಿ ತೆರಿಗೆ ಪರಿಷ್ಕರಣೆಯಾಗುತ್ತಿಲ್ಲ. ಇಲ್ಲಿನ ಆಯ್ದ ಸಿಬ್ಬಂದಿಗಳಿಗೆ ಸೂಕ್ತವಾದ ರೀತಿಯಲ್ಲಿ ತೆರಿಗೆ ಪರಿಷ್ಕರಿಸುವ ವಿಧಾನ ಗೊತ್ತಿಲ್ಲ, ತೆರಿಗೆ ಪರಿಷ್ಕರಣೆಗೆ ಅನುಭವ ಇರುವ ಸಿಬ್ಬಂದಿಗಳು ನೇಮಕವಾಗಬೇಕು. ಅರಿವಿಲ್ಲದವರಿಂದ, ಅನನುಭವಿಗಳಿಂದ ತೆರಿಗೆ ಪರಿಷ್ಕರಣೆ ಸಾಧ್ಯವಿಲ್ಲ ಎಂದಾಗ ಇದಕ್ಕೆ ಸದಸ್ಯರುಗಳಾದ ಎಸ್.ಎಚ್.ಮತೀನ್, ಪಟ್ಟಡ ರಂಜಿ ಪೂಣಚ್ಚ, ಡಿ.ಪಿ.ರಾಜೇಶ್, ಮಹಮ್ಮದ್ ರಾಫಿ, ವಿ.ಆರ್.ರಜನಿಕಾಂತ್ ಧ್ವನಿಗೂಡಿಸಿ ಕಳೆದ ವರ್ಷದ ಕೊರೊನಾದಿಂದ ಜನರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇನ್ನೂ ಪರಿಹಾರ ಕಂಡುಕೊAಡಿಲ್ಲ. ಈಗಲೇ ತೆರಿಗೆ ಪರಿಷ್ಕರಣೆ ಅಗತ್ಯವಿದೆಯಾ ಎಂದು ಪ್ರಶ್ನಿಸಿ ಆಸ್ತಿ ತೆರಿಗೆ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಅವರು ಮಾತನಾಡಿ ರಾಜ್ಯ ಸರಕಾರವು ಜಿ.ಎಸ್.ಡಿ.ಪಿಯ ಶೇ. ೦.೨೫ ಹೆಚ್ಚುವರಿ ಸಾಲ ಪಡೆಯಲು ಹಾಗೂ ೧೫ನೇ ಹಣಕಾಸಿನ ಆಯೋಗದ ಅನುದಾನ ಪಡೆಯುವ ನಿಟ್ಟಿನಲ್ಲಿ ಅರ್ಹರಾಗಲು ಅಲ್ಲದೆ ನಗರ ಸ್ಥಳೀಯ ಸಂಸ್ಥೆಗಳನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಮಾರುಕಟ್ಟೆ ಮಾರ್ಗಸೂಚಿ ಬೆಲೆಯ ಆಧಾರದ ಮೇಲೆ ಕೇಂದ್ರ ಸರಕಾರದ ನಿರ್ದೇಶನವಿರುವುದರಿಂದ ತೆರಿಗೆ ಪರಿಷ್ಕರಣೆ ಅನಿವಾರ್ಯ ಎಂದರು.
ಸದಸ್ಯೆ ಎಂ.ಕೆ.ದೇಚಮ್ಮ ಮಾತನಾಡಿ ಪಟ್ಟಣದ ಜನತೆ ಕೊರೊನಾ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ಯಾವುದೇ ಕಾರಣಕ್ಕೂ ಟ್ರೇಡ್ ಲೈಸೆನ್ಸ್ ಹಾಗೂ ವ್ಯಾಪಾರದ ಲೈಸೆನ್ಸ್ನ ಶುಲ್ಕವನ್ನು ಏರಿಕೆಗೊಳಿಸದಂತೆ ಸಭೆಗೆ ಸೂಚಿಸಿದರು. ನಾಮ ನಿರ್ದೇಶನ ಸದಸ್ಯರುಗಳಾದ ಇ.ಸಿ.ಜೀವನ್ ಹಾಗೂ ಕೂತಂಡ ಸಚಿನ್ ಆಸ್ತಿ ತೆರಿಗೆಯನ್ನು ಗರಿಷ್ಟ ಶೇಕಡ ೫ಕ್ಕೆ ವಿಧಿಸುವಂತೆ ಸಭೆಗೆ ಸಲಹೆ ನೀಡಿದರು.
ಪಟ್ಟಣ ಪಂಚಾಯಿತಿ ಕಂದಾಯ ನಿರೀಕ್ಷಕ ಸೊಮೇಶ್ ಸರಕಾರದಿಂದ ಬಂದ ತೆರಿಗೆ ಪರಿಷ್ಕರಣೆಯ ಸುತ್ತೋಲೆಯ ಮಾಹಿತಿಯ ವಿವರವನ್ನು ಸಭೆಯಲ್ಲಿ ಮಂಡಿಸಿ ವಿವಿಧ ಹಂತಗಳಲ್ಲಿ ತೆರಿಗೆ ವಿಧಿಸುವ ಸಂಬAಧದಲ್ಲಿ ಸಭೆಯಲ್ಲಿ ವೀಡೀಯೋ ಚಿತ್ರಣ ಪ್ರದರ್ಶಿಸಿದರು. ಪಟ್ಟಣ ಪಂಚಾಯಿತಿ ಅಭಿಯಂತರ ಎಂ.ಪಿ.ಹೇಮ್ಕುಮಾರ್ ಮಾತನಾಡಿ ಪಟ್ಟಣ ಪಂಚಾಯಿತಿಯಲ್ಲಿ ಸರಕಾರದ ಆದೇಶದಂತೆ ಆಸ್ತಿ ತೆರಿಗೆ ಪರಿಷ್ಕರಣೆಯಾದರೆ ಸರಕಾರದ ನಿರ್ದೇಶನದಂತೆ ಬರುವ ಅನುದಾನದಲ್ಲಿ ಪಟ್ಟಣದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಸಭೆಯಲ್ಲಿ ಉಪಾಧ್ಯಕ್ಷ ಕೆ.ಬಿ.ಹರ್ಷವರ್ಧನ್ ಹಾಗೂ ೧೩ ಮಂದಿ ಸದಸ್ಯರುಗಳು ಹಾಜರಿದ್ದರು.