ಸೋಮವಾರಪೇಟೆ,ಮಾ.೩: ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯ ಸರ್ಕಾರ ಸೋಮವಾರಪೇಟೆ ಪಟ್ಟಣಕ್ಕೆ ‘ಸ್ಥಳೀಯ ಯೋಜನಾ ಪ್ರದೇಶ’ವನ್ನು ರಚಿಸಿ ಆದೇಶ ಹೊರಡಿಸಿರುವ ಹಿನ್ನೆಲೆ ಗಡಿ ಗುರುತಿಸುವ ಕಾರ್ಯ ನಡೆಯುತ್ತಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರ ನೇತೃತ್ವದಲ್ಲಿ ಕಂದಾಯ ಇಲಾಖೆ, ಸಂಬAಧಿಸಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಪ.ಪಂ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನೇತೃತ್ವದಲ್ಲಿ ಗಡಿ ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಸ್ಥಳೀಯವಾಗಿ ಸರ್ಕಾರಿ ಹಾಗೂ ಖಾಸಗಿ ಅಭಿವೃದ್ಧಿ ಕಾಮಗಾರಿಗಳ ಮೇಲೆ ಕಣ್ಣಿಟ್ಟು ಕಾರ್ಯಗತಗೊಳಿಸುವುದರೊಂದಿಗೆ ಕಟ್ಟುನಿಟ್ಟಾಗಿ ತೆರಿಗೆ ಸಂಗ್ರಹಿಸುವ ಮೂಲಕ ಆರ್ಥಿಕವಾಗಿ ಸ್ಥಳೀಯ ಆಡಳಿತವನ್ನು ಸದೃಢಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.
ಈ ನಿಟ್ಟಿನಲ್ಲಿ ಮಡಿಕೇರಿಯ ‘ಮೂಡಾ’, ಕುಶಾಲನಗರ ಮಾದರಿಯ ‘ಕೂಡಾ’ದಂತೆಯೇ ಸೋಮವಾರಪೇಟೆ ಅಭಿವೃದ್ದಿ ಪ್ರಾಧಿಕಾರ ರಚಿಸಲು ಸರ್ಕಾರ ಮುಂದಾಗಿರುವ ಮುನ್ಸೂಚನೆ ಸಿಕ್ಕಿದೆ.
ಸೋಮವಾರಪೇಟೆ ಪಟ್ಟಣ ಸೇರಿದಂತೆ ಹಾನಗಲ್ಲು ಕಂದಾಯ ಗ್ರಾಮದ ೩೮೯.೯೨, ಚೌಡ್ಲು ಕಂದಾಯ ಗ್ರಾಮದ ೩೮೯.೭೫, ನೇಗಳ್ಳೆ ಕರ್ಕಳ್ಳಿಯ ೧೧.೫, ನಗರೂರು ಗ್ರಾಮದ ೩೦೨.೫ ಸೇರಿದಂತೆ ಒಟ್ಟು ೧೦೮೬.೬೭ ಹೆಕ್ಟೇರ್ ಪ್ರದೇಶ ಈ ಯೋಜನ ವ್ಯಾಪ್ತಿಗೆ ಒಳಪಡಲಿದೆ.
ಈ ಬಗ್ಗೆ ರಾಜ್ಯಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಸಿ.ಎಸ್.ಶಿವಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಆದೇಶ ಹಾಗೂ ಜಿಲ್ಲಾಧಿಕಾರಿಗಳ ಸೂಚನೆಯಂತೆ ತಹಶೀಲ್ದಾರ್ ಗೋವಿಂದರಾಜು ಅವರು ಸರ್ವೆಇಲಾಖೆ ಸಿಬ್ಬಂದಿಗಳೊAದಿಗೆ ಸ್ಥಳೀಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಮ್ಮುಖದಲ್ಲಿ ಸರ್ವೆ ನಡೆಸಿ ಗಡಿ ಗುರುತಿಸಿದರು.
ಜನಪ್ರತಿನಿಧಿಗಳ ಗೊಂದಲ: ಗಡಿ ಗುರುತಿಸುವಿಕೆಯ ಕಾರ್ಯ ನಡೆಯುತ್ತಿರುವ ಸಂದರ್ಭ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದೆ ಚೌಡ್ಲು ಗ್ರಾಮ ಪಂಚಾಯ್ತಿಯ ಜನಪ್ರತಿನಿಧಿಗಳು ಹಾಗೂ ಅಭಿವೃದ್ಧಿ ಅಧಿಕಾರಿ ಆಕ್ಷೇಪ ವ್ಯಕಪಡಿಸಿದ ಘಟನೆಯೂ ನಡೆಯಿತು.
ಚೌಡ್ಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂಪೂರ್ಣ ಕಂದಾಯ ಗ್ರಾಮ ಈ ಯೋಜನೆಗೆ ಒಳಪಡುತ್ತಿದೆ. ಇನ್ನು ಗ್ರಾಮ ಪಂಚಾಯಿತಿ ಏಕೆ? ಗ್ರಾ.ಪಂ. ಚುನಾವಣೆಯನ್ನು ನಡೆಸಿದ್ದೇಕೆ? ಎಂದು ಪ್ರಶ್ನಿಸಿದರಲ್ಲದೇ, ಸೋಮವಾರಪೇಟೆ ಪಟ್ಟಣ ಪಂಚಾಯ್ತಿಯನ್ನು ಮೇಲ್ದರ್ಜೆಗೆ ಏರಿಸುವುದರಲ್ಲಿ ನಮ್ಮ ಆಕ್ಷೇಪವಿಲ್ಲ; ಆದರೆ ಗ್ರಾಮ ಪಂಚಾಯ್ತಿಯೇ ಇಲ್ಲವಾದರೆ ಸ್ಥಳೀಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಹೇಗೆ? ಎಂದು ಚೌಡ್ಲು ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಉಪಾಧ್ಯಕ್ಷೆ ಮಂಜುಳಾ ಸುಬ್ರಮಣಿ, ಸದಸ್ಯರಾದ ನತೀಶ್ ಮಂದಣ್ಣ, ಸುರೇಶ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂದರ್ಭ ಪಟ್ಟಣ ಪಂಚಾಯ್ತಿ ನಾಮನಿರ್ದೇಶಿತ ಸದಸ್ಯ ಎಸ್.ಮಹೇಶ್ ಮಾತನಾಡಿ, ಪಟ್ಟಣ ಪಂಚಾಯ್ತಿ ಮೇಲ್ದರ್ಜೆಗೆ ಏರಿಸುವ ಯೋಜನೆಗೂ ಯೋಜನಾ ಪ್ರದೇಶ ರಚಿಸುವುದಕ್ಕೂ ಸಂಬAಧವಿಲ್ಲ. ಅಭಿವೃದ್ಧಿ ಪ್ರಾಧಿಕಾರ ರಚಿಸುವ ಉದ್ದೇಶದಿಂದ ಸರ್ಕಾರ ಈ ಆದೇಶ ಹೊರಡಿಸಿದೆಯೆಂದರು.
ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿರುವವರು ಗಡಿ ಸಮಸ್ಯೆಯಿಂದಾಗಿ, ಕಂದಾಯ ಇಲಾಖೆಯ ದಾಖಲಾತಿಯಂತೆ ನಗರೂರು ಕಂದಾಯ ಗ್ರಾಮವೆಂದು ಗ್ರಾಮ ಪಂಚಾಯ್ತಿಗಳಲ್ಲಿ ಅಲ್ಪಪ್ರಮಾಣದ ತೆರಿಗೆ ಪಾವತಿಸಿ ಬಡಾವಣೆಗಳನ್ನು ನಿರ್ಮಿಸಿ ಮಾರಾಟ ಮಾಡುತ್ತಿರುವುದೂ ಸೇರಿದಂತೆ ಗ್ರಾ.ಪಂ.ಮಟ್ಟದಲ್ಲಿ ಕಡಿಮೆ ಬೆಲೆಗೆ ಭೂಮಿ ಮಾರಾಟವಾಗುತ್ತಿರುವುದಕ್ಕೆ ಕಡಿವಾಣ ಬೀಳಲಿದೆ. ಈ ಪ್ರದೇಶಗಳು ಅಭಿವೃದ್ಧಿಯಾದರೆ ಎಲ್ಲಾ ಪಂಚಾಯ್ತಿಗಳಿಗೂ ಅನುಕೂಲವಾಗುತ್ತದೆ. ಈ ಬಗ್ಗೆ ಗೊಂದಲಗಳಿದ್ದರೆ ಮೂಡಾ ಅಥವಾ ಕೂಡಾ ಪ್ರಾಧಿಕಾರಕ್ಕೆ ಭೇಟಿ ನೀಡಿ ಅನುಮಾನ ಪರಿಹರಿಸಿಕೊಳ್ಳೋಣ ಎಂದು ಸಲಹೆ ನೀಡಿದರು.
ಸ್ಥಳೀಯ ಯೋಜನಾ ಪ್ರದೇಶದ ಗಡಿ ಗುರುತಿಸಲು ಸರ್ಕಾರ ಆದೇಶ ಮಾಡಿದೆ. ಅದರಂತೆ ತಾನು ಕರ್ತವ್ಯ ನಿರ್ವಹಿಸಬೇಕು ಎಂದು ತಹಶೀಲ್ದಾರ್ ಗೋವಿಂದರಾಜು ತಿಳಿಸಿ, ಚರ್ಚೆಗೆ ತೆರೆ ಎಳೆದರು.
ಈ ಸಂದರ್ಭ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ನಳಿನಿ ಗಣೇಶ್, ಸದಸ್ಯ ಬಿ.ಆರ್.ಮಹೇಶ್, ಮುಖ್ಯಾಧಿಕಾರಿ ನಾಚಪ್ಪ, ಚೌಡ್ಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪೂರ್ಣಕುಮಾರ್, ನೆರುಗಳಲೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಯನಾ, ಕಂದಾಯ ಪರಿವೀಕ್ಷಕ ಪ್ರಹ್ಲಾದ್, ಗ್ರಾಮ ಲೆಕ್ಕಿಗರಾದ ಹೇಮಾವತಿ, ಶ್ವೇತಾ, ಪಟ್ಟಣ ಪಂಚಾಯ್ತಿ ಸಿಬ್ಬಂದಿಗಳಾದ ರಫೀಕ್, ಜೀವನ್ ಹಾಗೂ ಸರ್ವೆ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.