ಮಡಿಕೇರಿ, ಮಾ. ೩ : ಪಿ ಅಂಡ್ ಜಿ ಕ್ರಿಯೇಷನ್ ಅಡಿಯಲ್ಲಿ ನಿರ್ಮಾಣವಾಗಿರುವ ಉಸಾರ್ ಕೊಡವ ಚಲನಚಿತ್ರ ತಾ. ೮ ರಂದು ನಾಪೋಕ್ಲುವಿನಲ್ಲಿ ಬಿಡುಗಡೆ ಯಾಗಲಿದೆ ಎಂದು ನಿರ್ದೇಶಕರಾದ ಬಾಳೆಯಡ ಪ್ರತೀಶ್ ಪೂವಯ್ಯ ಹಾಗೂ ಆಚೆಯಡ ಗಗನ್ ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇವರುಗಳು, ನಾಪೋಕ್ಲುವಿನ ಶ್ರೀ ರಾಮಮಂದಿರದ ಸಭಾಂಗಣದಲ್ಲಿ ಬೆಳಗ್ಗೆ ೧೧ ಗಂಟೆಗೆ ಚಿತ್ರ ಬಿಡುಗಡೆಯಾಗಲಿದ್ದು, ಮಾ. ೧೦ರ ವರೆಗೆ ಪ್ರತಿದಿನ ಬೆಳಿಗ್ಗೆ ೧೧ ಗಂಟೆ, ೨ ಗಂಟೆ ಹಾಗೂ ೬ ಗಂಟೆಗೆ ಮೂರು ಪ್ರದರ್ಶನ ನಡೆಯಲಿದೆ. ನಂತರ ದಿನಗಳಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರದರ್ಶನ ಕಾಣಲಿದೆ.
ಇಂದಿನ ಯುವಕ, ಯುವತಿಯರು ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದು, ಇದರ ಕಥಾಹಂದರವನ್ನು ಹೊಂದಿರುವ ಉಸಾರ್ ಚಲನಚಿತ್ರಕ್ಕೆ ರಮ್ಯ ನಾಣಯ್ಯ ಅವರು ನಿರ್ಮಾಪಕರಾಗಿದ್ದಾರೆ. ರೂ. ೧೭ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಕಳೆದ ಏಳು ತಿಂಗಳುಗಳ ಸತತ ಪ್ರಯತ್ನದಿಂದ ಸುಮಾರು ನೂರಕ್ಕಿಂತಲೂ ಅಧಿಕ ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ವೀರಾಜಪೇಟೆಯ ಟಿ.ಡಿ. ಮೋಹನ್ ಸಂಗೀತ ನಿರ್ದೇಶಕರಾಗಿದ್ದಾರೆ. ಸಂಕಲನಕಾರರಾಗಿ ಸಂಕೇತ್ ಶಿವಪ್ಪ, ಹಿನ್ನೆಲೆ ಸಂಗೀತವನ್ನು ವಿಲ್ಸನ್ ನೀಡಿದ್ದಾರೆ.
ಜಿಲ್ಲೆಯ ಸುಂದರ ತಾಣಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಕೊಡವ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಮಾದರಿ ಸೆಟ್ಟನ್ನು ನಿರ್ಮಿಸಿ ಚಿತ್ರೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಲ್ಲಾರಂಡ ರಾಜೇಶ್, ಅಮ್ಮಾಟಂಡ ದಿಲೀಪ್ ಚಿತ್ರದ ನಾಯಕ ನಟರಾಗಿದ್ದು, ನಾಯಕಿಯರಾಗಿ ಕುಪ್ಪಣಮಾಡ ಭೂಮಿಕಾ ಹಾಗೂ ತಾತಂಡ ಮೋನಿಕಾ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ತಾತಂಡ ಪ್ರಭಾ ನಾಣಯ್ಯ, ಪಟ್ಟಡ ಧನು ರಂಜನ್, ಕೋಳೇರ ಸನ್ನು ಕಾವೇರಪ್ಪ, ಚೆರುವಾಳಂಡ ಸುಜಲಾ ನಾಣಯ್ಯ, ಬಿದ್ದಂಡ ಉತ್ತಮ್, ವಾಂಚೀರ ವಿಠಲ ನಾಣಯ್ಯ, ವಾಂಚೀರ ಜಯ ನಂಜಪ್ಪ, ತೇಲಪಂಡ ಪವನ್, ಚಮ್ಮಟೀರ ಪ್ರವೀಣ್ ಉತ್ತಪ್ಪ, ಸೇರಿದಂತೆ ಅನೇಕ ಕಲಾವಿದರು ಪಾತ್ರ ನಿರ್ವಹಿಸಿದ್ದಾರೆ ಎಂದರು.
ಗೋಷ್ಠಿಯಲ್ಲಿ ನಿರ್ಮಾಪಕಿ ರಮ್ಯ ನಾಣಯ್ಯ, ವೀರಾಜಪೇಟೆ ಕೊಡವ ಸಮಾಜ ಅಧ್ಯಕ್ಷ ಹಾಗೂ ಕಲಾವಿದ ವಾಂಚಿರ ವಿಠಲ್ ನಾಣಯ್ಯ, ಕಲಾವಿದ ಚಮ್ಮಟ್ಟಿರ ಪ್ರವೀಣ್, ನೃತ್ಯ ನಿರ್ದೇಶಕಿ ಮಲ್ಲಮಾಡ ಶಾಮಲ ಸುನೀಲ್ ಇದ್ದರು.