ಸಿದ್ದಾಪುರ, ಮಾ. ೩: ಸಾಕಾನೆಗಳನ್ನು ಕಂಡ ಕಾಡಾನೆಗಳು ದೂರದಿಂದಲೇ ಹಿಂತಿರುಗಿದ ಘಟನೆ ಚೆನ್ನಂಗಿ ಬಸವನಹಳ್ಳಿ ಹಾಡಿಯಲ್ಲಿ ನಡೆದಿದೆ. ಚೆನ್ನಂಗಿ ಬಸವನಹಳ್ಳಿ ಹಾಡಿಯಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆಗಳು ರಾತ್ರಿ ಸಮಯದಲ್ಲಿ ಬಂದು ಮನೆಗಳ ಮೇಲೆ ದಾಳಿ ನಡೆಸುತ್ತಿತ್ತು. ಅಲ್ಲದೇ ಮನೆಗಳಿಗೆ ಹಾನಿ ಮಾಡುತ್ತಾ ಮನೆಗೆ ನುಗ್ಗಿ ಆಹಾರ ಪದಾರ್ಥಗಳನ್ನು ತಿಂದು ಪೀಠೋಪಕರಣಗಳನ್ನು ನಾಶಗೊಳಿಸುತ್ತಿತ್ತು.
ಈ ಹಿನ್ನೆಲೆಯಲ್ಲಿ ಹಾಡಿಯ ನಿವಾಸಿಗಳು ಕಾಡಾನೆ ಹಾವಳಿಯನ್ನು ತಡೆಗಟ್ಟಬೇಕೆಂದು ಅರಣ್ಯ ಇಲಾಖಾಧಿಕಾರಿಗಳ ಬಳಿ ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಮತ್ತಿಗೋಡು ಸಾಕಾನೆ ಶಿಬಿರದಿಂದ ಕಾಡಾನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಅನುಭವವಿರುವ ಸಾಕಾನೆಗಳಾದ ಭೀಮಾ ಹಾಗೂ ಶ್ರೀಕಂಠ ಎಂಬ ಎರಡು ಸಾಕಾನೆಗಳನ್ನು ಕರೆತಂದು ರಾತ್ರಿ ಕಾವಲಿಗೆ ಬಿಡಲಾಗಿದೆ. ಈ ನಡುವೆ ಉಪಟಳ ನೀಡುತ್ತಿರುವ ಒಂಟಿಸಲಗವೊAದು ಸೋಮವಾರ ರಾತ್ರಿ ಮನೆಗಳತ್ತ ಬಂದಿದ್ದು, ಸಾಕಾನೆ ಭೀಮಾ ಸಲಗವನ್ನು ಬೆನ್ನಟ್ಟಿದೆ. ಸಲಗ ಬೆದರಿ ಕಾಡಿನತ್ತ ತೆರಳಿದೆ ಎಂದು ಹಾಡಿಯ ನಿವಾಸಿಗಳು ತಿಳಿಸಿದ್ದಾರೆ. ಇದಾದ ಬಳಿಕ ಮಂಗಳವಾರದAದು ಕೂಡ ಕಾಡಾನೆಗಳು ಮನೆಯತ್ತ ಬರಲು ಮುಂದಾಗಿದ್ದು, ಭೀಮಾ ಮತ್ತು ಶ್ರೀಕಂಠ ಆನೆಗಳನ್ನು ಕಂಡ ಕೂಡಲೇ ಹಿಂತಿರುಗಿ ಕಾಡಿನತ್ತ ತೆರಳಿದವು ಎಂದು ನಿವಾಸಿಗಳು ತಿಳಿಸಿದ್ದಾರೆ.
-ವಾಸು ಎ.ಎನ್ .