ಮಡಿಕೇರಿ, ಮಾ.೨: ಸೋಮವಾರಪೇಟೆ ತಾಲೂಕು, ತೋಳೂರು ಶೆಟ್ಟಳ್ಳಿ ಗ್ರಾಮದ ಪೈಸಾರಿ ಜಾಗದ ಸರ್ವೆ ನಂ ೧/೬ರ ೮.೫೮ ಎಕರೆ ಜಾಗದಲ್ಲಿ ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ಇವರ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್, ಬಾಲಕಿಯರ ವಸತಿ ಶಾಲೆಯ ನಿರ್ಮಾಣಕ್ಕಾಗಿ ಜಾಗದಲ್ಲಿರುವ ಮರಗಳನ್ನು ತೆರವುಗೊಳಿಸುವ ಬಗ್ಗೆ ಪ್ರಸ್ತಾವನೆ ಬಂದಿದ್ದು, ಈ ಬಗ್ಗೆ ವಲಯ ಅರಣ್ಯಾದಿಕಾರಿ, ಸೋಮವಾರಪೇಟೆ ವಲಯ, ಸೋಮವಾರಪೇಟೆ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸೋಮವಾರಪೇಟೆ ಉಪ ವಿಭಾಗ, ಸೋಮವಾರಪೇಟೆ ಅವರು ೦೧ ಬೀಟೆ ಮತ್ತು ಸ್ಪೆತೋಡಿಯಾ, ಸುರ್ಗಿ ಹಾಗೂ ಕಾಡು ಜಾತಿಯ ೧೫೯ ಮರಗಳು ಹೀಗೆ ಒಟ್ಟು ೧೬೦ ಹಸಿ ಮರಗಳಿರುವುದಾಗಿ ವರದಿ ನೀಡಿದ್ದಾರೆ. ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ ನಿಯಮದಡಿ ೫೦ಕ್ಕೂ ಹೆಚ್ಚಿನ ಮರಗಳನ್ನು ಯಾವುದೇ ಸಾರ್ವಜನಿಕ ಉದ್ದೇಶಕ್ಕೆ ತೆರವುಗೊಳಿಸುವುದಲ್ಲಿ ಸಾರ್ವಜನಿಕರಿಂದ ಅಭಿಪ್ರಾಯ ಪಡೆಯುವುದು ಅಗತ್ಯವಾಗಿದೆ.
ಈ ಹಿನ್ನೆಲೆ ತಾ. ೫ ರಂದು ಮಡಿಕೇರಿ ಅರಣ್ಯ ಭವನ ಕಚೇರಿಯ ೨ನೇ ಮಹಡಿ ಸಭಾಂಗಣದಲ್ಲಿ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಭೆಯಲ್ಲಿ ಆಸಕ್ತ ಸಾರ್ವಜನಿಕರು ಪಾಲ್ಗೊಂಡು ಈ ಮರ ತೆರವಿನ ಕಾಮಗಾರಿಯನ್ನು ಮುಂದುವರೆಸುವ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಬಹುದು ಅಥವಾ ಲಿಖಿತವಾಗಿ ಸೂಕ್ತ ಅಭಿಪ್ರಾಯವನ್ನು ಮಾರ್ಚ್, ೦೫ ರೊಳಗೆ ಕಚೇರಿಗೆ ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ ೦೮೨೭೨-೨೨೮೩೦೫ ಕರೆ ಮಾಡಿ ಪಡೆಯಬಹುದು ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.