ಮಡಿಕೇರಿ, ಮಾ. ೨: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನವಿರೋಧಿ ನಡೆ ಅನುಸರಿಸುತ್ತಿದೆ ಎಂದು ಆರೋಪಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಪಕ್ಷದ ಕಾರ್ಯದರ್ಶಿ ಡಾ. ದುರ್ಗಾಪ್ರಸಾದ್ ಮಾತನಾಡಿ, ಕೊರೊನಾ ಪರಿಸ್ಥಿತಿಯಿಂದ ದೇಶದ ಜನತೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸ್ಪಂದಿಸುವ ಕೆಲಸ ಮಾಡಬೇಕಿತ್ತು. ಆದರೆ, ನಿರ್ಮಲ ಸೀತಾರಾಮನ್ ಮಂಡಿಸಿದ ಬಜೆಟ್ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಕೃಷಿ ರಂಗಕ್ಕೆ ಪಾಲನ್ನು ಶೇ.೮ರಷ್ಟು ಕಡಿತಗೊಳಿಸಲಾಗಿದೆ.

ಬಿಸಿ ಊಟ ಕಾರ್ಯಕ್ರಮಕ್ಕೆ ಕಳೆದ ವರ್ಷಕ್ಕಿಂತ ೧೪೦೦ ಕೋಟಿ ಕಡಿಮೆ ಹಣ ಮೀಸಲಿಡಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ ೮೦೦ ಕೋಟಿ ಹಣ ಕಡಿತಗೊಳಿಸಲಾಗಿದೆ. ಕೆಲಸ ನೈಪುಣ್ಯ ವಿಕಸನಕ್ಕೆ ಶೇ.೩೫ರಷ್ಟು ಕಡಿಮೆಗೊಳಿಸಲಾಗಿದೆ. ದೇಶಿಯ ವಿದ್ಯಾಭ್ಯಾಸ ಮಿಷನ್‌ಗೆ ೫,೦೦೦ ಕೋಟಿ ಕಡಿತಗೊಳಿಸಲಾಗಿದೆ. ಇದರ ನಡುವೆ ಆಗರ್ಭ ಶ್ರೀಮಂತರನ್ನು ಸಂತೋಷಿಸಲು ಸಾರ್ವಜನಿಕ ಕ್ಷೇತ್ರಗಳಲ್ಲಿರುವ ಎಲ್ಲಾ ಉದ್ದಿಮೆಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಜೋಸ್, ಸಾಬು, ಕುಟ್ಟಪ್ಪ, ಮಹದೇವ್, ಶಿವಪ್ಪ, ರಮೇಶ್, ಶಾಖಾ ಕಾರ್ಯದರ್ಶಿ ಭರತ್ ಇದ್ದರು.